ಹರಿಹರ, ಜು. 5- ಸರ್ಕಾರದ ಲಾಕ್ ಡೌನ್‌ಗೆ ನಗರದಲ್ಲಿ ಪೂರ್ಣ ಬೆಂಬಲ ಕಂಡು ಬಂತು.
ನಗರದ ಜನನಿಬಿಡ ಪ್ರದೇಶವಾದ ತರಕಾರಿ ಮಾರುಕಟ್ಟೆ, ಮುಖ್ಯ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಅಂಚೆ ಕಚೇರಿ ರಸ್ತೆ, ದೇವಸ್ಥಾನ ರಸ್ತೆ, ಪಿ.ಬಿ. ರಸ್ತೆ, ಹೈಸ್ಕೂಲ್ ಬಡಾವಣೆ, ಹರಪನಹಳ್ಳಿ ರಸ್ತೆ ಸೇರಿದಂತೆ ಇತರೆ ರಸ್ತೆಗಳಲ್ಲಿರುವ ತರಕಾರಿ, ದಿನಸಿ ಪದಾರ್ಥ, ಬಟ್ಟೆ, ಮೊಬೈಲ್, ಹೋಟೆಲ್, ಹಣ್ಣು, ಹೂವು, ಬಾರ್, ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್, ಸಣ್ಣ ಕೈಗಾರಿಕೆ, ಹಾರ್ಡ್‌ವೇರ್, ಪಾತ್ರೆ, ಜ್ಯೂಸ್, ಬೇಕರಿ ಎಗ್ ರೈಸ್, ಎಳನೀರು, ಕಾಯಿ, ಗ್ಯಾರೇಜ್, ಮಾಲ್, ಟಾಕೀಸ್, ರೈಸ್ ಮಿಲ್, ಕಟ್ಟಿಗೆ ಡಿಪೋ, ಗೊಬ್ಬರ, ಮೀನು, ಮಾಂಸ, ಚಿಕನ್ ಅಂಗಡಿಗಳು ಬೆಳಗ್ಗೆ ಯಿಂದ ರಾತ್ರಿಯವರೆಗೆ ಮುಚ್ಚಿದ್ದರಿಂದ ರಸ್ತೆ ಬಿಕೊ ಎನ್ನುತ್ತಿದ್ದವು. ಆಟೋ, ಟ್ಯಾಕ್ಸಿಗಳು ಸಹ ರಸ್ತೆಗೆ ಇಳಿಯಲಿಲ್ಲ. ಬಸ್ ಸಂಚಾರ ಕಡಿತಗೊಳಿಸಲಾಗಿತ್ತು. ಆಸ್ಪತ್ರೆ, ಔಷಧಿ, ಹಾಲು ಸೇರಿದಂತೆ ಅಗತ್ಯ ವಸ್ತುಗಳನ್ನು ಹೊರತು ಪಡಿಸಿ ಉಳಿದಂತೆ ಎಲ್ಲಾ ವಾಣಿಜ್ಯ ಚಟುವಟಿಕೆಗಳು ಸ್ತಬ್ಧಗೊಂಡಿದ್ದವು.
ದೇವಸ್ಥಾನದಲ್ಲಿ ಇವತ್ತು ಹುಣ್ಣಿಮೆ ಇರುವುದರಿಂದ ಬೆಳಗ್ಗೆ ವಿಶೇಷ ಪೂಜೆ ಮಾಡಿ ನಂತರದಲ್ಲಿ ಬಾಗಿಲು ಹಾಕಲಾಯಿತು. ಅತಿ ಪ್ರಮುಖ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿಗಳು ಬಿಟ್ಟರೆ ಯಾವುದೇ ಸ್ಥಳಕ್ಕೆ ಹೋದರು ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಓಡಾಡುವುದು ಕಂಡುಬರಲಿಲ್ಲ,
ನಗರದಲ್ಲಿ ನಿನ್ನೆ ರಾತ್ರಿಯಿಂದಲೇ 144 ನೇ ಸೆಕ್ಷನ್ ಅಡಿ ನಿಷೇಧ ಹೇರಲಾಗಿತ್ತು. ಪೊಲೀಸ್ ಇಲಾಖೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಬಿ . ರಾಮಚಂದ್ರಪ್ಪ, ಪೌರಾಯುಕ್ತೆ ಎಸ್. ಲಕ್ಷ್ಮಿ, ಸಿಪಿಐ ಎಸ್ ಶಿವಪ್ರಸಾದ್, ಪಿಎಸ್ಐ ಎಸ್. ಶೈಲಜಾ, ಗ್ರಾಮಾಂತರ ಪಿಎಸ್ಐ ಡಿ. ರವಿಕುಮಾರ್ ಹಾಗೂ ಇತರರು ಹಾಜರಿದ್ದರು.