ರಾಣೇಬೆನ್ನೂರು, ಜು.3- ಭಂಡಾರ ದೊಡೆಯ, ಗುಡದಯ್ಯ, ಏಳುಕೋಟೆಪ್ಪ ಹೀಗೆ ಅನೇಕ ಹೆಸರುಗಳಿಂದ ಕರೆಯುವ, ಅಪಾರ ಭಕ್ತರ ಆರಾಧ್ಯ ದೈವ ದೇವರಗುಡ್ಡದ (ಗುಡ್ಡಗುಡ್ಡಾಪುರ) ಮಾಲತೇಶನ ಸಾಮೀಪ್ಯ ದಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ಸ್ವಾಮಿಯ ಪೂಜಾ ಕೈಂಕರ್ಯ ನಡೆಸುವ ಪ್ರಧಾನ ಅರ್ಚಕ ಸಂತೋಷ್ ಭಟ್ ಪೂಜಾರ ಹಾಗೂ ಸಂಗಡಿಗರು ಆರೋಪಿಸಿದ್ದಾರೆ.
ಸ್ಥಳೀಯ ಹಾಗೂ ಹೊರ ರಾಜ್ಯದವರು ಸೇರಿ ಗ್ರಾಮದ ಸಮೀಪದಲ್ಲಿ ಗಣಿಗಾರಿಕೆ ಮೂಲಕ ಕಲ್ಲು ತೆಗೆದು, ಒಡೆದು ಜಲ್ಲಿ ಮಾಡಿ ಮಾರಾಟ ಮಾಡಲಾಗುತ್ತಿದ್ದ ಸ್ಥಳದಲ್ಲಿ ಪತ್ರಕ ರ್ತರ ಎದುರು ಅವರು ಈ ಮಾಹಿತಿ ನೀಡಿದರು.
ಕೇರಳದ ದೀಪಿಕಾ ಸಂಸ್ಥೆಯ ಶ್ರೀನಾಥ ತಂಗರಾಜ್, ಜಿ.ಹೆಚ್.ವಿ ಸಂಸ್ಥೆ, ಬಳ್ಳಾರಿ ಜಿಲ್ಲೆಯ ಹೊಳಲಿನ ಅಜಯ ಪೂಜಾರ, ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನ ಚನ್ನಬಸಪ್ಪ ಬಳ್ಳಾರಿ, ಸ್ಥಳೀಯರಾದ ಮೈಲಪ್ಪ ಗುಡಗೂರ ಹಾಗೂ ದುರುಗಪ್ಪ ನಪುರ ಮತ್ತಿತರರು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಪೂಜಾರ ದೂರಿದ್ದಾರೆ.
ಹಸಿರು ವಲಯದ ಇಲ್ಲಿ ರೈತರಿಗೆ ತಪ್ಪು ಮಾಹಿತಿ ನೀಡಿ ಅವರ ಜಮೀನುಗಳನ್ನು ಖರೀದಿ ಮಾಡಿದ್ದು, ಗಣಿಗಾರಿಕೆಗಾಗಿ ಕೇವಲ ನಾಲ್ಕೈದು ಎಕರೆಗೆ ಪರವಾನಿಗೆ ಪಡೆದಿದ್ದು, ಸುಮಾರು ಇಪ್ಪತ್ತು ಎಕರೆಗೂ ಹೆಚ್ಚು ಜಮೀನಿ ನಲ್ಲಿ ಗಣಿಗಾರಿಕೆ ನಡೆದಿದೆ. ರಾತ್ರಿ ಹೊತ್ತು ಮದ್ದು ಸ್ಪೋಟಿಸುವ ಶಬ್ಧಕ್ಕೆ ಗ್ರಾಮದ ಅನೇಕ ಮನೆಗಳು ಶಿಥಿಲಗೊಂಡಿವೆ ಹಾಗೂ ಕೆಲವರಿಗೆ ಹೃದಯಾಘಾತವಾದ ಉದಾಹರಣೆಗಳು ಇವೆ ಎಂದು ಪೂಜಾರ ತಿಳಿಸಿದ್ದಾರೆ.
ಪುರಾತನ ಇಲಾಖೆಗೆ ಸೇರಿದ ಹಾಗೂ ಅಪಾರ ಭಕ್ತ ಸಮೂಹವನ್ನು ಹೊಂದಿರುವ ಶ್ರೀ ದೇವರಗುಡ್ಡದ ಮಾಲತೇಶನ ದೇವಸ್ಥಾನದ ಪರಿಸರದಲ್ಲಿ ಗಣಿಗಾರಿಕೆಯಿಂದ ಆಗಬಹುದಾದ ತೊಂದರೆ ಬಗ್ಗೆ ಅಲ್ಲಿನ ಜನತೆ ತೀವ್ರ ತರದ ಆಘಾತಕ್ಕೆ ಒಳಗಾಗಿದ್ದಾರೆ. ಈ ಗಣಿಗಾರಿಕೆಯನ್ನು ತಡೆದು ದೇವರಾದಿಯಾಗಿ ಭಕ್ತ ಸಮೂಹಕ್ಕೆ ಆಗುವ ತೊಂದರೆಯನ್ನು ಗಮನಿಸುವಂತೆ ಅವರು ಮನವಿ ಮಾಡಿದ್ದಾರೆ.
ವಕೀಲರ ವಿವರಣೆ : 2013 ರಲ್ಲಿ ದೇವ ಸ್ಥಾನ ಹಾಗೂ ಗ್ರಾಮಕ್ಕೆ ಆಗುವ ಅನ್ಯಾಯದ ವಿರುದ್ಧ ನ್ಯಾಯ ಪಡೆಯಲು ಗ್ರಾಮದ ಪ್ರಕಾಶ ಬಳ್ಳಾರಿ, ಚಿಕ್ಕಪ್ಪ ಉರ್ಮಿ, ನಿಂಗಪ್ಪ ಹುಲ್ಯಾಳ, ನಿಂಗಪ್ಪ ದ್ಯಾವಣ್ಣನವರ ಎಂಬುವವರು ನ್ಯಾಯಾಲದ ಮೊರೆ ಹೋಗಿದ್ದರು. ಸ್ಥಳೀಯ ಪ್ರಭಾವಿಗಳು ಅವರಿಗೆ ತಪ್ಪು ಮಾಹಿತಿ ನೀಡಿ ಮೊಕದ್ದಮೆ ವಾಪಸ್ ಪಡೆಯಲಾಗಿದ್ದು, ಯಾರ ಮುಲಾಜಿಗೂ ಒಳಪಡದೆ ನ್ಯಾಯ ಕ್ಕಾಗಿ ಮತ್ತೆ ನ್ಯಾಯಾಲಯಕ್ಕೆ ತೆರಳುವುದಾಗಿ ಜೊತೆಗಿದ್ದ ವಕೀಲ ಸಂಶಿ ಮೈಲಪ್ಪ ಹೇಳಿದರು.