ಕೊರೊನಾ ಕಾಲದಲ್ಲಿ ಬದಲಾದ ರಕ್ತದಾನ

ವಾಟ್ಸ್‌ಅಪ್ ಗ್ರೂಪ್‌ಗಳ ನೆರವು, ದಾನಿಗಳ ಆರೋಗ್ಯದ ಮೇಲೂ ನಿಗಾ

ದಾವಣಗೆರೆ, ಜು. 2 – ಕೊರೊನಾ ಹಲವಾರು ವಿಷಯಗಳನ್ನು ಬದಲಿಸಿದೆ. ಅದರಲ್ಲಿ ರಕ್ತದಾನ ಸಹ ಸೇರ್ಪಡೆಯಾಗಿದೆ. ಕೊರೊನಾ ಮುಂಚಿನ ಹಾಗೂ ಕೊರೊನಾ ನಂತರದ ರಕ್ತದಾನ ಪಡೆಯುವ ವಿಧಾನದಲ್ಲಿ ಬದಲಾವಣೆಯಾಗಿದೆ.

ಕೊರೊನಾ ಸಂದರ್ಭದಲ್ಲಿ ಅಗತ್ಯವಾದ ರಕ್ತದಾನ ಪಡೆಯಲು ವಾಟ್ಸ್‌ಅಪ್‌ ಗ್ರೂಪ್‌ ಗಳು ನೆರವಾಗಿವೆ. ಜಿಲ್ಲಾ ಚಿಗಟೇರಿ ಸಾರ್ವ ಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿರುವ 60 ತಲಸ್ಸೇಮಿಯಾ ರೋಗಿಗಳಿಗೆ ರಕ್ತ ಪೂರಣ ಚಿಕಿತ್ಸೆ ನೀಡಲು ಹೊಸ ವಿಧಾನಗಳನ್ನು ಅನುಸರಿಸಬೇಕಾಯಿತು ಎಂದು ಜಿಲ್ಲಾ ಸಿ.ಜಿ. ಆಸ್ಪತ್ರೆಯ ರಕ್ತ ಭಂಡಾರದ ವೈದ್ಯಾಧಿಕಾರಿ ಡಾ. ಡಿ.ಹೆಚ್. ಗೀತಾ ತಿಳಿಸಿದ್ದಾರೆ.

ತಲಸೇಮಿಯಾ ರೋಗಿಗಳಿಗೆ ಸಿ.ಜಿ. ಆಸ್ಪತ್ರೆಯಲ್ಲಿ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಇವರಿಗೆ ಪರೀಕ್ಷಾ ಶುಲ್ಕ ಸಹ ಪಡೆಯುವುದಿಲ್ಲ. ಇವರಿಗೆ ನಿಯಮಿತವಾಗಿ ರಕ್ತದ ಅಗತ್ಯ ಬರುವುದರಿಂದ, ಆ ಬಗ್ಗೆ ಮೊದಲೇ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು ಎಂದವರು ಹೇಳಿದ್ದಾರೆ.

ಕೊರೊನಾದಿಂದಾಗಿ ಮಾರ್ಚ್ ಅಂತ್ಯದ ವೇಳೆಗೆ ಪರಿಸ್ಥಿತಿ ಬದಲಾಗುವ ಸೂಚನೆ ಕಂಡು ಬಂದಿತ್ತು. ಆಗಲೇ ರಕ್ತದಾನ ಪಡೆ ಯುವ ವಿಧಾನವನ್ನು ಬದಲಿಸಿದ್ದೆವು ಎಂದವರು ತಿಳಿಸಿದ್ದಾರೆ.

ರಕ್ತದಾನಿಗಳ ಮಾಹಿತಿ ನಮ್ಮ ಬಳಿ ಇತ್ತು. ಇವರನ್ನು ವಾಟ್ಸ್‌ಅಪ್‌ ಗ್ರೂಪ್‌ಗಳಲ್ಲಿ ಸೇರ್ಪಡೆ ಮಾಡಿದ್ದೆವು. ಮುಂದಿನ ಐದು ದಿನಗಳ ಅಗತ್ಯಗಳನ್ನು ಪರಿಗಣಿಸಿ ಗ್ರೂಪ್‌ಗಳಲ್ಲಿ ಸೂಚನೆ ನೀಡುತ್ತಿದ್ದೆವು. ಅದಕ್ಕೆ ದಾನಿಗಳು ಸೂಕ್ತವಾಗಿ ಸ್ಪಂದಿಸಿದ್ದಾರೆ ಎಂದವರು ಹೇಳಿದ್ದಾರೆ.

ನಗರಗಳಿಂದ ಹಿಡಿದು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಹಳ್ಳಿಗಳಲ್ಲಿ ಆಗಾಗ ರಕ್ತದಾನ ಶಿಬಿರಗಳನ್ನು ಮಾಡಿ ರಕ್ತ ಪಡೆದಿದ್ದೇವೆ. ಅಗತ್ಯವಾದ ಸಂದರ್ಭದಲ್ಲಿ ಹಲವಾರು ಸಾಮಾಜಿಕ ಸಂಘಟನೆಗಳ ಜೊತೆ ಕೈ ಜೋಡಿಸಿದ್ದೇವೆ ಎಂದು ಡಾ. ಗೀತಾ ತಿಳಿಸಿದ್ದಾರೆ.

ಕೊರೊನಾಗೆ ಮುಂಚಿನ ಸಮಯದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿರುತ್ತಿತ್ತು. ಆಗ ದಿನಕ್ಕೆ 40 ಜನರವರೆಗೆ ರಕ್ತದ ಅಗತ್ಯ ಕಂಡು ಬರುತ್ತಿತ್ತು. ಲಾಕ್‌ಡೌನ್‌ ನಂತರದಲ್ಲಿ ಅಪಘಾತದ ಕಾರಣದಿಂದಾಗಿ ರಕ್ತ ಬಯಸುವವರ ಸಂಖ್ಯೆ ಬಹುತೇಕ ನಿಂತಿತ್ತು. ಈಗಲೂ ಸಹ, ಅಪಘಾತದ ಕಾರಣಕ್ಕಾಗಿ ರಕ್ತ ಬೇಕಾದವರ ಸಂಖ್ಯೆ ದಿನಕ್ಕೆ ಐದರ ಒಳಗೇ ಇದೆ ಎಂದವರು ಹೇಳಿದ್ದಾರೆ.

ಪ್ರಸಕ್ತ ತಲಸ್ಸೇಮಿಯಾ, ಹೆರಿಗೆ ಹಾಗೂ ಅಪಘಾತಗಳ ಸಂದರ್ಭದಲ್ಲಿ ರಕ್ತದ ಅಗತ್ಯವಿದೆ. ಆದರೆ, ಕೊರೊನಾಗೆ ಮುಂಚೆ ಸಿ.ಜಿ. ಆಸ್ಪತ್ರೆಯಲ್ಲಿ ರಕ್ತದ ಅಗತ್ಯ ತಿಂಗಳಿಗೆ 800 ಬಾಟಲಿಗಳವರೆಗೆ ಇತ್ತು. ಅದೀಗ ತಿಂಗಳಿಗೆ 150ಕ್ಕೆ ಇಳಿದಿದೆ ಎಂದವರು ತಿಳಿಸಿದ್ದಾರೆ.

ಕೊರೊನಾದ ಈ ಸಮಯದಲ್ಲಿ ರಕ್ತ ಪೂರೈಕೆ ವಿಧಾನದಲ್ಲಿ ಬದಲಾವಣೆ ತರಬೇಕಿದೆ. ರಕ್ತದಾನ ಮಾಡಲು ಬಂದವರು ಇತ್ತೀಚಿನ ದಿನಗಳಲ್ಲಿ ಕೆಮ್ಮು – ಶೀತ ಇತ್ಯಾದಿಗಳಿಗೆ ಸಿಲುಕಿರುವ ಬಗ್ಗೆ ಪ್ರಶ್ನಿಸುತ್ತೇವೆ. ರಕ್ತ ಪಡೆದ ನಂತರವೂ ಅವರ ಸಂಪರ್ಕ ದಲ್ಲಿರುತ್ತೇವೆ. 10-12 ದಿನಗಳ ಕಾಲ ಅವರ ಆರೋಗ್ಯದ ಬಗ್ಗೆ ನಿಗಾ ವಹಿಸುತ್ತೇವೆ. ಆನಂತರವೇ ಅವರ ರಕ್ತವನ್ನು ಅಗತ್ಯ ಇರುವವರಿಗೆ ನೀಡುತ್ತಿದ್ದೇವೆ ಎಂದು ಡಾ. ಗೀತಾ ಹೇಳಿದ್ದಾರೆ.

ಕೊರೊನಾ ಇದೆ ಎಂದ ಮಾತ್ರಕ್ಕೆ ರಕ್ತದಾನಕ್ಕೆ ಹೆದರಬಾರದು. ಬೇರೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ರಕ್ತದಾನದ ಅಗತ್ಯ ಇದ್ದೇ ಇರುತ್ತದೆ. ಹೀಗಾಗಿ ರಕ್ತದಾನಿಗಳು ಎಂದಿನಂತೆ ರಕ್ತದಾನ ಮಾಡಲು ಮುಂದಾಗಬೇಕು ಎಂದವರು ಸಲಹೆ ನೀಡಿದ್ದಾರೆ.

error: Content is protected !!