ರಾಣೇಬೆನ್ನೂರು, ಜು.1- ವಿಶ್ವದಾದ್ಯಂತ ರಣಕೇಕೆ ಹೊಡೆಯುತ್ತಿರುವ ಹಾಗೂ ನಿನ್ನೆ ಮೊದಲ ಬಾರಿಗೆ ಗ್ರಾಮ ಪ್ರವೇಶಿಸಿದ ಕೊರೊನಾ ಹೆಮ್ಮಾರಿಯನ್ನು ತಡೆಗಟ್ಟಲು ತಾಲ್ಲೂಕಿನ ಹಲಗೇರಿ ಗ್ರಾಮ ದಿನಾಂಕ 1 ರಿಂದ 10 ರವರೆಗೆ ಸ್ವಯಂ ಬಂದ್ ಘೋಷಿಸಿಕೊಂಡು ನಿನ್ನೆಯಿಂದ ಯಶಸ್ವಿಯಾಗಿ ನಡೆಸಿದೆ.
ನಾಡೋಜ ದಿವಂಗತ ಪಾಪು, ರಂಗಭೂಮಿ ಸಾಧಕ ಜೆಟ್ಟೆಪ್ಪ ಅವರ ತವರೂರು. ಕುಡಿಯುವ ನೀರಿಗಾಗಿ ಸಕ್ಕರೆ ತ್ಯಜಿಸಿದ ಜನರೂರು. ಹೀಗೆ ಜನಜನಿತವಾದ ಹಲಗೇರಿ ಈಗ ಕೊರೊನಾ ಹಿಮ್ಮೆಟ್ಟಿಸಲು ದಿಟ್ಟ ನಿಲುವು ತಾಳಿದ್ದು ಈ ನೆಲದ ಜನರ ಹೆಮ್ಮೆ.
ಔಷಧಿ ಅಂಗಡಿ ಹಾಗೂ ಖಾಸಗಿ ಆಸ್ಪತ್ರೆಗಳನ್ನು ಹೊರತು ಪಡಿಸಿ ಉಳಿದಂತೆ ಕಿರಾಣಿ, ಗೊಬ್ಬರ ಕ್ರಿಮಿನಾಶಕ, ಹಾರ್ಡ್‌ವೇರ್, ಮೋಟಾರ್ ವೈಂಡಿಂಗ್, ಹಿಟ್ಟಿನ ಗಿರಣಿಗಳು ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಕಾರ್ಯ ನಿರ್ವಹಿಸಲಿವೆ. ಪ್ರತಿವಾರದ ಬೆಳ್ಳುಳ್ಳಿ ಹಾಗೂ ಇತರೆ ಸರಕುಗಳ ಸಂತೆ ರದ್ದು ಪಡಿಸಲಾಗಿದೆ. ಗ್ರಾಮದ ಎಲ್ಲ ವ್ಯಾಪಾರಸ್ಥರು, ಗ್ರಾಮಸ್ಥರು, ರೈತರು, ಗ್ರಾಪಂ ಸದಸ್ಯರು ಹಾಗೂ ಹಿರಿಯರೆಲ್ಲ ಸಭೆ ನಡೆಸಿ ಬಂದ್ ನಿರ್ಣಯ ಕೈಗೊಳ್ಳಲಾಯಿತು ಎಂದು ತಿಳಿದುಬಂದಿದೆ.