ಸೋಂಕಿನ ಬಗ್ಗೆ ಜಾಗೃತಿ ಇರಲಿ, ಆತಂಕ ಬೇಡ : ಜಗಳೂರು ಶಾಸಕ ಎಸ್.ವಿ.ರಾಮಚಂದ್ರ
ಜಗಳೂರು, ಜು.1- ಕೊರೊನ ಸೋಂಕು ಜಗಳೂರಿಗೆ ಕಾಲಿಟ್ಟಿದ್ದು, ಉಲ್ಬಣವಾಗದಂತೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂದು ಶಾಸಕ ಎಸ್.ವಿ. ರಾಮಚಂದ್ರ ಕಟ್ಟುನಿಟ್ಟಿನ ಆದೇಶ ನೀಡಿದರು.
ಪಟ್ಟಣದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಕರೆದಿದ್ದ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.
ವಿಧಾನಸಭಾ ಕ್ಷೇತ್ರದ ಅರಸೀಕೆರೆ ಪೊಲೀಸ್ ಸಿಬ್ಬಂದಿ ಹಾಗೂ ಪಟ್ಟಣದ ಪೌರ ಕಾರ್ಮಿಕ, ಚಿಕ್ಕ ಉಜ್ಜಿನಿ 11 ವರ್ಷದ ಮಗು ಸೇರಿದಂತೆ 4 ಜನರಿಗೆ ಕೋವಿಡ್ ಪಾಸಿಟಿವ್ ದೃಢವಾಗಿದೆ. 270 ಸೋಂಕಿತರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿ ಕ್ವಾರಂಟೈನ್ ನಲ್ಲಿಡಲಾಗಿದೆ. ಇವರಿಗೆ ಸೂಕ್ತ ಬಿಗಿ ಭದ್ರತೆ ಒದಗಿಸಲು ಅಧಿಕಾರಿಗಳು ಮುಂದಾ ಗಬೇಕು ಎಂದು ಸೂಚನೆ ನೀಡಿದರು.
ದಂಡ ವಿಧಿಸಲು ಸೂಚನೆ: ಪಟ್ಟಣದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿ, ಮಾಸ್ಕ್ ಧರಿಸದೇ ಸಂಚರಿಸಿದರೆ ಕೇಸ್ ದಾಖಲಿಸಿ ಎಂದು ಪೊಲೀಸ್ ಇಲಾಖೆಗೆ ಶಾಸಕರು ಸೂಚಿಸಿದರು.
ಸಭೆಯಲ್ಲಿಯೇ ಜಿಲ್ಲಾ ಆರೋಗ್ಯ ಅಧಿಕಾರಿಗೆ ಫೊನ್ ಕರೆ ಮಾಡಿ, ಎನ್95 ಮಾಸ್ಕ್ ,ಪಿಪಿ ಕಿಟ್, ಹ್ಯಾಂಡ್ ಗ್ಲೌಸ್ ಸೇರಿದಂತೆ ಹೆಚ್ಚಿನ ಸುರಕ್ಷತಾ ಕಿಟ್ ಗಳನ್ನು ಜಗಳೂರಿಗೆ ರವಾನಿಸುವಂತೆ ಸೂಚಿಸಿದರು.
ಪಟ್ಟಣದಲ್ಲಿ ಪಾಸಿಟಿವ್ ಪ್ರಕರಣ ದೃಢವಾದರೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿ. ಹೆಚ್ಚಿನದಾಗಿ ಅಗತ್ಯ ವಿರುವ ಕಡೆ ಕೋವಿಡ್ ಆಸ್ಪತ್ರೆ ಮತ್ತು ಕ್ವಾರಂಟೈನ್ ಗೆ ಉದ್ಗಟ್ಟ, ಪಟ್ಟಣದ ಬಾಲಕರ ವಸತಿ ನಿಲಯ ಬಳಕೆ ಮಾಡಿಕೊಂಡು ವ್ಯವಸ್ಥೆ ಮಾಡಬೇಕು.
ಗ್ರಾಮ ಪಂಚಾಯಿತಿಗಳಲ್ಲಿ 14ನೇ ಹಣಕಾ ಸಿನಡಿ ಹಣ ಬಳಕೆ ಮಾಡಿಕೊಂಡು ಸಾನಿಟೈಸರ್, ಮಾಸ್ಕ್ ಖರೀದಿಸಿ. ಬೇಡಿಕೆಗಳಿದ್ದರೆ ಸರ್ಕಾರದಿಂದ ಒದಗಿಸಲು ಬದ್ದ. ಜನರಿಗೆ ತೊಂದರೆಯಾಗದಂತೆ ನಿಗಾವಹಿಸಿ ಎಂದು ಶಾಸಕರು ಅಧಿಕಾರಿಗಳಿಗೆ ಆದೇಶಿಸಿದರು.
ಸಿಪಿಐ ದುರುಗಪ್ಪ ಮಾತನಾಡಿ, ಈಗಾಗಲೇ 3 ಕಡೆ ಸೀಲ್‌ಡೌನ್ ಮಾಡಲಾಗಿದೆ. ಕ್ವಾರಂಟೈನ್ ಹಾಗೂ ಸೀಲ್ ಡೌನ್ ಸುತ್ತಲು ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದರು.
ಟಿಎಚ್ಓ ಡಾ|| ನಾಗರಾಜ್ ಮಾತನಾಡಿ, ಇಂದು ಪಟ್ಟಣದ ಪೌರ ಕಾರ್ಮಿಕರ ಸಂಪರ್ಕಿತ 5 ಜನರನ್ನು ಕ್ವಾರಂಟೈನ್ ಮಾಡಲಾಗಿದೆ
ತಾಲ್ಲೂಕಿನಲ್ಲಿ ಗಂಟಲು ದ್ರವ ತಪಾಸಣಾ ಯಂತ್ರಗಳು ಹಾಗೂ ಚಿಕಿತ್ಸೆಗೆ ಸೂಕ್ತ ಸೌಲಭ್ಯ ಲಭ್ಯವಿದ್ದರೆ ಅನುಕೂಲವಾಗುತ್ತಿತ್ತು. ಆದರೆ, ಪ್ರಾಥಮಿಕ ಚಿಕಿತ್ಸೆ ಕೈಗೊಂಡು ಹೆಚ್ವಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಆಶಾ, ಆರೋಗ್ಯ ಕಾರ್ಯಕರ್ತೆಯರ ಮೂಲಕ ಸೀಲ್ ಡೌನ್ ಪ್ರದೇಶದ ನಿವಾಸಿಗಳ ಗರ್ಭಿಣಿ, ಮಕ್ಕಳ ವೃದ್ದರ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಭಾರಿ ತಹಶೀಲ್ದಾರ್ ಗಿರೀಶ್ ಬಾಬು, ತಾ.ಪಂ. ಇಒ ಮಲ್ಲಾನಾಯ್ಕ, ಪಪಂ ಮುಖ್ಯಾಧಿಕಾರಿ ರಾಜು
ಡಿ.ಬಣಕಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ ಮಹೇಶ್, ಪಿಡಬ್ಲೂಡಿ ಎಇಇ ರುದ್ರಪ್ಪ, ಅರಣ್ಯ ಇಲಾಖೆಯ ಶ್ವೇತಾ, ಡಾ.ಮಲ್ಲಪ್ಪ ಸೇರಿದಂತೆ ಇತ ರರು ಸಭೆಯಲ್ಲಿ ಭಾಗವಹಿಸಿದ್ದರು.