ಮಾಸಿಕ ಗೌರವ ಧನ ಖಾತ್ರಿಪಡಿಸಲು ಆಶಾ ಕಾರ್ಯಕರ್ತೆಯರ ಆಗ್ರಹ

ನಗರದಲ್ಲಿ ಬೃಹತ್ ಪ್ರತಿಭಟನೆ, ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಕೆ

ದಾವಣಗೆರೆ, ಜೂ.30- ತಮಗೆ 12 ಸಾವಿರ ರೂ. ಮಾಸಿಕ ಗೌರವ ಧನ ಖಾತರಿಪಡಿಸಿ ಮತ್ತು ಅಗತ್ಯವಿರುವ ಆರೋಗ್ಯ ರಕ್ಷಣಾ ಸಾಮಗ್ರಿಗಳನ್ನು ನೀಡಲು ಒತ್ತಾಯಿಸಿ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಮತ್ತು ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಮಾಯಿಸಿದ್ದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಿದರು.

ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ವಿವಿಧ ಆರೋಗ್ಯ ಕಾರ್ಯಕ್ರಮಗಳಲ್ಲಿ ಕೆಲಸಗಳನ್ನು ಮಾಡುತ್ತಿದ್ದಾರೆ. ಪ್ರೋತ್ಸಾಹ ಧನ ಮತ್ತು ಗೌರವ ಧನ ಎರಡೂ ರೀತಿಯ ಮಿಶ್ರಣದ ವಿಚಿತ್ರ ವೇತನ ಮಾದರಿಯಲ್ಲಿ ಅವರಿಗೆ ಹಣವನ್ನು ಪಾವತಿಸಲಾಗುತ್ತಿದೆ. ಪ್ರತಿ ಆಶಾ ಕಾರ್ಯಕರ್ತೆಗೆ ಮಾಸಿಕ 8-9 ಸಾವಿರ ಗೌರವ ಧನ ನೀಡಲು ಇಲಾಖೆಯಲ್ಲಿ ಬಜೆಟ್ ಅನುದಾನ ನಿಗದಿ ಮಾಡಲಾಗಿದೆ. ಪ್ರೋತ್ಸಾಹ ಧನದ ವಿವಿಧ ಕೆಲಸಗಳ ಹಣವನ್ನು ಮತ್ತು ಗೌರವ ಧನದ ಹಣವನ್ನು ಬಿಡಿ ಬಿಡಿಯಾಗಿ ನೀಡಲಾಗುತ್ತದೆ. ಪ್ರೋತ್ಸಾಹ ಧನ ಮತ್ತು ಗೌರವ ಧನ ಎರಡನ್ನೂ ಒಟ್ಟಿಗೇ ಸೇರಿಸಿ ಮಾಸಿಕ ಒಂದೇ ನಿಶ್ಚಿತ ಗೌರವ ಧನ 12 ಸಾವಿರ ಪ್ರತಿ ತಿಂಗಳು ನೀಡಬೇಕು ಎಂದು ಆಗ್ರಹಿಸಿದರು.

ಕೊರೊನಾ ವಾರಿಯರ್ಸ್ ಗಳಾದ ಆಶಾಕಾರ್ಯಕರ್ತೆ ಯರ ಆರೋಗ್ಯ ರಕ್ಷಣೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಗತ್ಯವಾಗಿ ಬೇಕಾದಷ್ಟು ಮಾಸ್ಕ್, ಫೇಸ್ ಶೀಲ್ಡ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಜರ್ ಇತ್ಯಾದಿಗಳನ್ನು ನೀಡಲಾಗಿಲ್ಲ. ಅವರ ಆರೋಗ್ಯ ರಕ್ಷಣೆಗಾಗಿ ಎಲ್ಲಾ ರಕ್ಷಣಾ ಸಾಮಗ್ರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ನೀಡಬೇಕು. ಇವರಿಗಾಗಿ ಘೋಷಣೆ ಮಾಡಿರುವ ಕ್ರಮವಾಗಿ  2 ಮತ್ತು 3 ಸಾವಿರ ಪ್ಯಾಕೇಜನ್ನು ಕೂಡಲೇ ತಲುಪಿಸಬೇಕು ಎಂಬ ಇತ್ಯಾದಿ ಹಕ್ಕೊತ್ತಾಯ ಮಾಡಿದರು.

ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಅಣಬೇರು, ಮಂಜುನಾಥ್ ಕುಕ್ಕುವಾಡ, ಭಾರತಿ, ನೇತ್ರಾವತಿ, ರಾಜೇಶ್ವರಿ, ಪರ್ವಿನ್ ಬಾನು, ಮಂಜುಳಾ, ಸರ್ವಮಂಗಳಮ್ಮ, ಭಾಗ್ಯ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!