ವಿಪಕ್ಷದ ಆರೋಪದಲ್ಲಿ ಹುರುಳಿಲ್ಲ

ಜಗಳೂರು ತಾಲ್ಲೂಕು ಬಿಜೆಪಿ ಹೆಚ್.ಸಿ.ಮಹೇಶ್‌

ಜಗಳೂರು, ಜೂ.29- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಣೆ ಮಾಡಿದ ಪ್ಯಾಕೇಜ್ ಜನ ಸಾಮಾನ್ಯರಿಗೆ ತಲುಪಿಲ್ಲವೆಂದು ವಿರೋಧ ಪಕ್ಷದವರು ಮಾಡಿರುವ ಆರೋಪದಲ್ಲಿ  ಹುರುಳಿಲ್ಲ. ಪ್ರತಿಯೊಬ್ಬ ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಹೆಚ್.ಸಿ.ಮಹೇಶ್ ಪಲ್ಲಾಗಟ್ಟೆ ತಿಳಿಸಿದರು.

ಇಂದಿಲ್ಲಿ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ತೋಟಗಾರಿಕೆ ಇಲಾಖೆ ಯಿಂದ ಹೂವು ಬೆಳೆಗಾರರಿಗೆ ಹೆಕ್ಟೇರ್ ಗೆ 25 ಸಾವಿರ ರೂ.ಗಳಂತೆ 215 ಜನರಿಗೆ ಪರಿಹಾರ ಸಿಕ್ಕಿದೆ. ಹಣ್ಣು, ತರಕಾರಿ ಬೆಳೆಗಾರರಿಗೆ ಹೆಕ್ಟೇರ್‌ಗೆ 15 ಸಾವಿರದಂತೆ 153 ಫಲಾನುಭವಿಗಳಿಗೆ ಪರಿಹಾರ ನೀಡಲಾಗಿದೆ. ತರಕಾರಿ ಬೆಳೆದ 2389 ಫಲಾನುಭವಿಗಳಿಗೆ ಪರಿಹಾರ ಸಿಕ್ಕಿದೆ ಎಂದರು. 

2018-19ನೇ ಸಾಲಿನಲ್ಲಿ 1211 ಹೆಕ್ಟೇರ್‌ ಅಡಿಕೆ ಬೆಳೆಗೆ ವಿಮೆ ಮಾಡಿಸಿದ್ದರು. 2019ಕ್ಕೆ 155 ಜನಕ್ಕೆ 78 ಲಕ್ಷ ವಿಮೆ ರೈತರ ಖಾತೆಗಳಿಗೆ ಜಮೆಯಾಗಿದೆ. ಈಗ 1 ಹೆಕ್ಟೇರ್‌ 6400 ರೂ. ವಿಮೆ ಕಟ್ಟಿದರೆ, ಬೆಳೆ ವಿಫಲವಾದರೆ 1.28 ಲಕ್ಷ ಹಣ ಬರುತ್ತದೆ. ದಾಳಿಂಬೆ ಬೆಳೆದ 14 ಜನರಿಗೆ 18.90 ಲಕ್ಷ ವಿಮೆ ಬಂದಿದೆ. ಇದರ ಜತೆಯಲ್ಲಿ ರಾಜ್ಯ ಸರ್ಕಾರ ಲಾಕ್‌ಡೌನ್‌ನಿಂದ ಮೆಕ್ಕೆಜೋಳ ದಲ್ಲಿ ನಷ್ಟ ಅನುಭವಿಸಿದ ರೈತರಿಗೆ 5 ಸಾವಿರ ಪರಿಹಾರದ ಹಣನ್ನು ಖಾತೆಗಳಿಗೆ ತುಂಬಲಾಗಿದೆ. ಕೃಷಿ ಕಾರ್ಮಿಕರು, ಆಟೋ, ಕಾರು ಚಾಲಕರು, ಕ್ಷೌರಿಕರಿಗೆ ತಲಾ 5 ಸಾವಿರ ರೂ. ಸಹಾಯ ಧನ ನೀಡಿದೆ. ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂ. ಚೆಕ್ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಬಿಡುಗಡೆ ಮಾಡಿ, ಎಲ್ಲಾ ಸಂಘ ಸಂಸ್ಥೆಗಳು, ಬ್ಯಾಂಕ್‌ಗಳಿಗೆ ಹಣ ಕೊಟ್ಟಿದೆ. ರೈತರು ಬೀಜ, ಗೊಬ್ಬರ ಖರೀದಿಗೆ ಮೂರು ಹಂತಗಳಲ್ಲಿ ರೈತರ ಖಾತೆಗೆ 6 ಸಾವಿರ ಹಣ ತುಂಬಿದೆ. 60 ವರ್ಷದವರಿಗೆ 600 ರೂ., 65 ವರ್ಷ ದಾಟಿದ ವೃದ್ಧರಿಗೆ 1 ಸಾವಿರ ವೃದ್ಧಾಪ್ಯ ವೇತನ ನೀಡಿದೆ ಎಂದರು. 

ಎಪಿಎಂಸಿ ಅಧ್ಯಕ್ಷ ರೇಣುಕಾನಂದ, ಉಪಾಧ್ಯಕ್ಷ ಗುರುಮೂರ್ತಿ, ಜಿ.ಪಂ ಸದಸ್ಯ ಎಸ್.ಕೆ.ಮಂಜುನಾಥ್, ಮಾಜಿ ಅಧ್ಯಕ್ಷ ಡಿ.ವಿ.ನಾಗಪ್ಪ, ತಾ.ಪಂ ಸದಸ್ಯ ಸಿದ್ದೇಶ್, ಡಿಡಿಸಿಸಿ ಬ್ಯಾಂಕ್ ನಿರ್ದೇಶಕ ಸೂರಡ್ಡಿಹಳ್ಳಿ ಶರಣಪ್ಪ, ಯುವ ಮೋರ್ಚಾ ಅಧ್ಯಕ್ಷ ಸೂರ್ಯಕಿರಣ್, ಮುಖಂಡ ಬಿಸ್ತುವಳ್ಳಿ ಬಾಬು, ಗೌರಿಪುರ ಶಿವಣ್ಣ, ದೇವಿಕೆರೆ ಶಿವಕುಮಾರ್, ಪ.ಪಂ ಸದಸ್ಯ ಪಾಪಲಿಂಗಪ್ಪ, ಗ್ರಾ.ಪಂ. ಸದಸ್ಯೆ ಪದ್ಮ ಸೇರಿದಂತೆ ಮತ್ತಿತರರಿದ್ದರು.

error: Content is protected !!