ಹನುಮಂತಪ್ಪ ಸೋಮಲಾಪುರ ಒತ್ತಾಯ
ದಾವಣಗೆರೆ, ಜೂ.27- ಪ್ರಭು ಎಂದೇ ಹೆಸರಾಗಿದ್ದ ಸಾಮಾಜಿಕ ಸೇವಾ ಕಾರ್ಯಕರ್ತ ದಿ.ಹೆಚ್.ಎಂ. ಪ್ರಭುಲಿಂಗಯ್ಯ ನಿರ್ಮಿಸಿದ ಬಸ್ ತಂಗುದಾಣದ ಪುನರ್ ನಿರ್ಮಾಣ ಕಾರ್ಯ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ತ್ವರಿತವಾಗಿ ಕೈಗೂಡಬೇಕು ಎಂದು ಕೆ.ಟಿ.ಜೆ. ನಗರ ಗಾಂಧೀಜಿ ಹರಿಜನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಕೆ.ಪಿ.ಸಿ.ಸಿ. ಎಸ್ಸಿ ವಿಭಾಗದ ಕಾರ್ಯದರ್ಶಿ ಸೋಮ ಲಾಪುರದ ಹನುಮಂತಪ್ಪ ಒತ್ತಾಯಿಸಿದ್ದಾರೆ.
ಪತ್ರಕರ್ತರಾಗಿ, ವಿವಿಧ ಕ್ರೀಡೆ, ಸಾಹಿತ್ಯಿಕ ಸಂಘಟನೆಗಳ ಅಧ್ವರ್ಯರಾಗಿ, ನಾಡು-ನುಡಿಗಳ ಅಸೀಮ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ಪ್ರಭು ಅವರು ಮಾಜಿ ಸಚಿವ ಹೆಚ್.ಆಂಜನೇಯ ನೇತೃತ್ವದಲ್ಲಿ ನಮ್ಮ ಮಿತ್ರರೆಲ್ಲರನ್ನೂ ಒಗ್ಗೂಡಿಸಿಕೊಂಡು `ಶಾಮನೂರು ಶಿವಶಂಕರಪ್ಪ ಅಭಿಮಾನಿಗಳ ಸಂಘ’ ರಚಿಸಿ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಅಂದು ಅವರು ರೂಪಿಸಿದ `ಮಾನಸ ಕನ್ನಡ ಸಂಘ’ ಇಂದಿಗೂ ಅವರ ಆಶಯಕ್ಕೆ ತಕ್ಕಂತೆ ಉತ್ತಮ ಕಾರ್ಯಗಳಿಂದ ಜನ ಮೆಚ್ಚುಗೆ ಗಳಿಸಿದೆ ಎಂದು ಹನುಮಂತಪ್ಪ ಸ್ಮರಿಸಿದ್ದಾರೆ.
1998ರಲ್ಲಿ ರಸ್ತೆ ಅಪಘಾತದಲ್ಲಿ ಅಕಾಲಿಕವಾಗಿ ನಮ್ಮನ್ನಗಲಿದ ಪ್ರಭು (ಈ ಬಗ್ಗೆ ಈಗಾಗಲೇ ಪತ್ರಕರ್ತ ಮಿತ್ರ ಹಳೇಬೀಡು ರಾಮಪ್ರಸಾದ್ ವಿವರವಾಗಿ ದಾಖಲಿಸಿದ್ದಾರೆ) ತಾವು ಕಣ್ಮರೆಯಾಗುವ ಕೆಲ ದಿನಗಳ ಹಿಂದೆ ತಾನೇ ಆಸಕ್ತರನ್ನು ಸೇರಿ ಸಿಕೊಂಡು ಎಂ.ಸಿ.ಕಾಲೋನಿಯ ಬಾಪೂಜಿ ಹೈಸ್ಕೂಲ್ ವೃತ್ತದಲ್ಲಿ ಬಸ್ ತಂಗುದಾಣ ನಿರ್ಮಾಣದ ಯೋಜನೆ ಹಾಕಿಕೊಂಡರು.
ನಾಡಿನ ಹಿರಿಯ ಸಂಗೀತ ವಿದ್ವಾನ್ ವಿದ್ಯಾಭೂಷಣರಿಂದ ಉದ್ಘಾಟಿಸಿದ ಆ ತಂಗುದಾಣ ಇಂದು ತನ್ನ ಮೂಲ ಸ್ವರೂಪ, ಗುರಿ ಎರಡನ್ನೂ ಕಳೆದುಕೊಂಡು ಹಗಲು ತರಕಾರಿ ಮಾರಾಟಕ್ಕೆ, ರಾತ್ರಿ ಪೋಲಿ ಪಟಾಲಂಗಳ ವಿಶ್ರಾಂತಿಗೆ ಆಶ್ರಯವಾಗಿದೆ. ಬಸ್‌ಗಾಗಿ ಕಾಯುವವರು ಎಂದಿನಂತೆ ರಸ್ತೆ ಬದಿ ನಿಲ್ಲುವ ದುಃಸ್ಥಿತಿಗೆ ಬಂದಿದ್ದು, ವಿಶೇಷವಾಗಿ ಮಕ್ಕಳು ಬವಣೆ ಪಡುವಂತಾಗಿದೆ ಎಂದು ವಿಷಾದಿಸಿದ್ದಾರೆ.
ಮನೆಗೆ ಮಾರಿ-ಪರರಿಗೆ ಉಪಕಾರಿ ಯಂತೆ ಬಾಳಿಹೋದ ಪ್ರಭುಲಿಂಗಯ್ಯನವರ ಹೆಸರು ಚಿರಸ್ಥಾಯಿಯಾಗಿ ಉಳಿಯಲು ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಪ್ರಭು ಹೆಸರಿನೊಂದಿಗೆ ಈ ತಂಗುದಾಣ ಪುನರ್ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.