ಹರಿಹರ, ಜೂ.27- ನಗರದಲ್ಲಿ ಕೊರೊನಾ ಸೋಂಕು ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗೆ ದೃಢಪಟ್ಟಿರುವ ಹಿನ್ನೆಲೆಯಲ್ಲಿ `ಡಿ’ ಗ್ರೂಪ್ ನೌಕರರು ಭಯದ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಭೇಟಿ ಮಾಡಿ, ಅವರ ಸಂಕಷ್ಟಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಈ ವೇಳೆ ಆಸ್ಪತ್ರೆಯ ನೌಕರರು ಮಾತನಾಡಿ, ನಮಗೆ ಯಾವುದೇ ರೀತಿಯ ರಕ್ಷಣೆ ಇಲ್ಲ, ಎನ್-95 ಮಾಸ್ಕ್ ಸೇರಿದಂತೆ ಇತರೆ ಯಾವುದೇ ಆರೋಗ್ಯ ರಕ್ಷಣಾ ಸೌಲಭ್ಯಗಳನ್ನು ನೀಡುತ್ತಿಲ್ಲ. ಇಲ್ಲಿನ ಆಸ್ಪತ್ರೆಗೆ ಪ್ರತಿನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಾರೆ. ಆದರೆ ನಮ್ಮ ರಕ್ಷಣೆಗೆ ಆರೋಗ್ಯ ಕವಚಗಳು ಸರಿಯಾಗಿ ಲ್ಲದಿದ್ದರೆ ಯಾವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯ ಎಂದು ತಮ್ಮ ಅಳಲು ತೋಡಿಕೊಂಡರು.
ಕಾರ್ಮಿಕರ ಸಂಘದ ಅಧ್ಯಕ್ಷ ಪಂಚಾಕ್ಷರಿ ಮಾತನಾಡಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ದಿನಗೂಲಿ ನೌಕರರ ಸೇವೆ ಅಮೂಲ್ಯವಾದದ್ದು, ಅವರು ತಮ್ಮ ಮನೆಗಳಿಂದ ಹೊರಗುಳಿದ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡಿ ರುತ್ತಾರೆ. ಸೋಂಕಿತ ಮಹಿಳೆ ಸುಮಾರು ಮೂರು ದಿನಗಳ ಕಾಲ ಆಸ್ಪತ್ರೆಯ ಆವರಣದಲ್ಲಿ ಕೆಲಸ ಮಾಡಿದ್ದಾರೆ.
ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಮುಖ್ಯಾಧಿಕಾರಿ ಡಾ. ಎಲ್. ಹನುಮನಾಯ್ಕ್ ಸರಿಯಾದ ಸಮಯದಲ್ಲಿ ಬಂದು ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡದೇ ಇರುವುದು ಮತ್ತು ಸಿಬ್ಬಂದಿ ಗಳಿಗೆ ಸರಿಯಾದ ರಕ್ಷಣೆ ಬಗ್ಗೆ ಗಮನವನ್ನು ಕೊಡದೇ ಇರುವುದರಿಂದ ಈ ರೀತಿ ಸೋಂಕು ಹರಡುವುದಕ್ಕೆ ಕಾರಣವಾಗಿದೆ ಎಂದು ಆರೋಪ ಮಾಡಿದರು.
ತಹಶೀಲ್ದಾರ್ ರಾಮಚಂದ್ರಪ್ಪ ಮಾತನಾಡಿ, ಕೋವಿಡ್-19 ಸೋಂಕು ತಡೆಗಟ್ಟಲು ಸರ್ಕಾರ ಅನೇಕ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಆದರೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಹನುಮನಾಯ್ಕ್ ಅವರ ವರ್ತನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಅವರಿಗೆ ಈ ಕೂಡಲೇ ನೋಟಿಸ್ ಜಾರಿ ಮಾಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ರಾಘವನ್, ಡಾ. ಸುರೇಶ್ ಬಸರ್ ಕೋಡ್, ಡಾ. ತಿಪ್ಪೇಸ್ವಾಮಿ, ಡಾ. ಚಂದ್ರಮೋಹನ್, ಎಂ.ವಿ. ಹೊರಕೇರಿ, ಅಶ್ರಫ್ ಆಲಿ ಹಾಗೂ ಇತರರು ಹಾಜರಿದ್ದರು.