ರಾಣೇಬೆನ್ನೂರು, ಜೂ.28- ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲ್ಲೂಕಿನ ವಿಕಲ ಚೇತನರಿಗೆ ಗುರುತಿನ ಕಾರ್ಡ್ಗಳನ್ನು ಶಾಸಕ ಅರುಣಕುಮಾರ್ ಪೂಜಾರ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅರುಣಕುಮಾರ್, ನಗರದ ಸಾರ್ವಜನಿಕ ಆಸ್ಪತ್ರೆ ಹಾಗೂ ಹೆರಿಗೆ ಆಸ್ಪತ್ರೆಯಲ್ಲಿ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದು, ಕೂಡಲೇ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚಿಸಿದರು. ಆಸ್ಪತ್ರೆಯ ಆಡಳಿತಾಧಿಕಾರಿ ಗೋವಿಂದ ಮಾತನಾಡಿ ಸ್ವಚ್ಛತೆಗೆ ಗುತ್ತಿಗೆ ನೀಡಲಾಗಿದೆ. 10 ಜನರು ಎರಡು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಹತ್ತು ಜನ ಕೆಲಸಗಾರರು ಇದ್ದರೂ ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲವಾಗಿದೆ ಎಂದ ಅವರು 10 ಜನ ಕೆಲಸಗಾರ ರೊಂದಿಗೆ ಮಾತನಾಡಿ, ಸ್ವಚ್ಛತೆ ಇಲ್ಲವೆಂದು ಗುಡುಗಿದರು. ಇಂದಿನಿಂದ ಗುತ್ತಿಗೆದಾರರು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಿ. ಇಲ್ಲವಾದಲ್ಲಿ ಸಂಬಳ ನೀಡಬೇಡಿ ಎಂದು ವೈದ್ಯರಿಗೆ ಸೂಚಿಸಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ತಾಲ್ಲೂಕು ವೈದ್ಯಾಧಿಕಾರಿ ಸಂತೋಷ, ರೈತ ಮುಖಂಡ ಕೃಷ್ಣಮೂರ್ತಿ ಲಮಾಣಿ ಸೇರಿದಂತೆ ತಾಲ್ಲೂಕಿನ ವೈದ್ಯರು, ಸಿಬ್ಬಂದಿಗಳು ಹಾಜರಿದ್ದರು.