ದಾವಣಗೆರೆ, ಜೂ. 28- ತಾಲ್ಲೂಕಿನ ಖುಷ್ಕಿ ಪ್ರದೇ ಶದ ಶೇ. 90 ರಷ್ಟು ವಿಸ್ತೀರ್ಣವನ್ನು ಮೆಕ್ಕೆಜೋಳ ಒಂದೇ ಬೆಳೆ ಆವರಿಸಿಕೊಂಡಿದೆ. ಆದ್ದರಿಂದ ಈ ಬೆಳೆಯ ವೈಜ್ಞಾನಿಕ ನಿರ್ವಹಣೆ ಅತೀ ಮುಖ್ಯವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಚ್.ಕೆ.ರೇವಣಸಿದ್ದನಗೌಡ ಹೇಳಿದರು.
ಕೃಷಿ ಇಲಾಖೆ ಹಾಗೂ ಗಂಗಾ ಕಾವೇರಿ ಸೀಡ್ಸ್ ಕಂಪನಿಯವರ ಸಹಯೋಗದಲ್ಲಿ ಮಾಸ್ಕ್ ದಿನಾಚರಣೆ ಅಂಗವಾಗಿ ನರಗನಹಳ್ಳಿ ಗ್ರಾಮದಲ್ಲಿ ಮೊನ್ನೆ ಹಮ್ಮಿಕೊಳ್ಳ ಲಾಗಿದ್ದ ಉಚಿತ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಹಾಗೂ ಮೆಕ್ಕೆಜೋಳ ಬೆಳೆಯಲ್ಲಿ ಲದ್ದಿಹುಳು ಹತೋಟಿ ತರಬೇತಿ ಕಾರ್ಯಕ್ರಮದಲ್ಲಿ ಮೆಕ್ಕೆಜೋಳ ಬೆಳೆಯ ನಿರ್ವಹಣೆ ಬಗ್ಗೆ ಕುರಿತು ಅವರು ಮಾತನಾಡಿದರು.
ಮೆಕ್ಕೆಜೋಳ ವಾಡಿಕೆಯಲ್ಲಿ ಲೇಜಿಮನ್ (ಆಲಸೀ ಗರ) ಬೆಳೆಯಾಗಿ, ಇಂದಿನ ಕೂಲಿ ಕಾರ್ಮಿಕರ ಸಮಸ್ಯೆಯ ಸ್ಥಿತಿಯಲ್ಲಿ ಅನಿವಾರ್ಯ ವಾಗಿ ರೈತರು ಈ ಬೆಳೆಯನ್ನು ಬೆಳೆಯುತ್ತಿದ್ದಾರೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಈ ಬೆಳೆಗೆ ಲದ್ದಿ ಹುಳು ಎಂಬ ಕೀಟ ಬಾಧೆ ತುಂಬಾ ಹಾನಿಯುಂಟು ಮಾಡುತ್ತಿದೆ. ಈಗಾಗಲೇ ತಾಲ್ಲೂಕಿನ ಕಸಬಾ ಹೋಬಳಿ ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದು, ಈ ಕೀಟಕ್ಕೆ ಕೀಟನಾಶಕ ಸಿಂಪರಣೆ ಅತ್ಯವಶ್ಯಕವಾಗಿದೆ. ಜೊತೆಗೆ ಸಿಂಪರಣೆಯ ಪದ್ಧತಿಯೂ ಮುಖ್ಯವಾಗಿದೆ ಎಂದರು.
ಈ ಕೀಟ ಬಾಧೆಗೆ ಇಮಾಮೆಕ್ಟಿನ್ ಬೆಂಜೋಯೇಟ್ ಶೇ. 5 ಎಸ್.ಪಿ., ಅಥವಾ 0.4 ಗ್ರಾಂ ಅಥವಾ ಸ್ಪೆನೋ ಸಾಡ್ 45 ಎಸ್.ಪಿ. 0.3 ಮಿ.ಲಿ. ಅಥವಾ ಥೈಯೋಡಿ ಕಾರ್ಬ್ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಕಡ್ಡಾಯವಾಗಿ ಕೀಟ ನಾಶಕವನ್ನು ಸುಳಿಗೆ ಬೀಳುವಂತೆ ಸಿಂಪರಣೆ ಮಾಡಬೇಕು. ಜೊತೆಗೆ ರೈತರು ಯೂರಿಯಾ ಗೊಬ್ಬರವನ್ನು ಅವಶ್ಯಕತೆಗನುಗುಣವಾಗಿ ಉಪಯೋಗಿ ಸಬೇಕು. ಶುಷ್ಕ ವಾತಾವರಣ ಮುಂದುವರೆದಲ್ಲಿ ನೀರಿನಲ್ಲಿ ಕರಗುವ ಗೊಬ್ಬರ ಗಳನ್ನು ಬೆಳೆಗಳಿಗೆ ಸಿಂಪರಣೆ ಮಾಡಿ, ಪೋಷಕಾಂಶ ನೀಡುವುದರಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮದ ಪ್ರಗತಿಪರ ರೈತ ಶಿವಣ್ಣ ಮಾತನಾಡಿ, ಮೆಕ್ಕೆಜೋಳ ಬೆಳೆಯನ್ನು ರೈತರು ವೈಜ್ಞಾನಿಕವಾಗಿ ಬೆಳೆಯುವುದರ ಜೊತೆಗೆ, ಬೆಳೆ ಪರಿವರ್ತನೆ ಮಾಡಿಕೊಂಡರೆ ಹಾಗೂ ಬೆಳೆದ ಬೆಳೆಗೆ ಸರ್ಕಾರ ಉತ್ತಮ ಬೆಂಬಲ ಬೆಲೆಯನ್ನು ಹಂಗಾಮು ಪೂರ್ವ ದಲ್ಲಿಯೇ ನಿಗದಿಪಡಿಸಿದರೆ ಒಳ್ಳೆಯದಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗಂಗಾ ಕಾವೇರಿ ಸಂಸ್ಥೆಯ ಬೀಜ ವಿತರಕರಾದ ದಿನೇಶ್ ಮಾತನಾಡಿ, ಕೋವಿಡ್-19 ಮಹಾ ಮಾರಿ ನಡುವೆಯೂ ಕೃಷಿ ಕಾರ್ಯಗಳನ್ನು ನಿಗದಿತ ಸಮಯಕ್ಕೆ ಕೈಗೊಳ್ಳುವುದು ಜೀವನಕ್ಕೆ ಅನಿವಾರ್ಯ ಮತ್ತು ಅವಶ್ಯಕವಾಗಿದೆ. ಇದರ ಹಿನ್ನೆಲೆಯಲ್ಲಿ ಕಂಪನಿಯು ಸಾಮಾಜಿಕ ಜವಾಬ್ದಾರಿಯ ಅರಿವಿನಡಿಯಲ್ಲಿ ಗ್ರಾಮದಲ್ಲಿನ ಎಲ್ಲಾ ರೈತರಿಗೆ ಉಚಿತವಾಗಿ ಮಾಸ್ಕ್, ಸ್ಯಾನಿಟೈಸರ್ ಮತ್ತು ಕೈಕವಚ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿಗಳಾದ ಗಿರೀಶ್, ಗಂಗಾ ಕಾವೇರಿ ಸಂಸ್ಥೆಯ ಪ್ರತಿನಿಧಿಗಳಾದ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.