ಜಗಳೂರಿನಲ್ಲಿ ಶಾಸಕ ಎಸ್.ವಿ.ರಾಮಚಂದ್ರ
ಜಗಳೂರು, ಜೂ.28- ಪಟ್ಟಣದ ಗುರುಭವನ ಮುಂಭಾಗದಲ್ಲಿ ನಿರ್ಮಿಸುತ್ತಿರುವ ಮೈದಾನದ ಒಳಗಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ರಾಷ್ಟ್ರೀಯ ಹಬ್ಬಗಳು ಕ್ರೀಡಾಪಟುಗಳಿಗೆ ಆಟವಾಡಲು ವಿವಿಧ ಕಾರ್ಯಕ್ರಮಗಳನ್ನು ಮಾಡಲು ತುಂಬಾ ಸಹಕಾರಿಯಾಗುತ್ತದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ತಿಳಿಸಿದರು.
ಪಟ್ಟಣದಲ್ಲಿ ವಿಶೇಷ ಅನುದಾನದ 4 ಕೋಟಿ ರೂ. ವೆಚ್ಚದಲ್ಲಿ ಮುಖ್ಯ ರಸ್ತೆಯ ಎರಡೂ ಬದಿಯಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಎಸ್.ವಿ. ರಾಮಚಂದ್ರ ದಿಢೀರನೇ ಭೇಟಿ ನೀಡಿ ವೀಕ್ಷಣೆ ಮಾಡಿ ಮಾತನಾಡಿದರು.
ಗುರು ಭವನದ ಮುಂಭಾಗದಲ್ಲಿರುವ ಮೈದಾನವನ್ನು ಎಸ್ಎಫ್ಸಿ ಶಾಸಕರ ವಿಶೇಷ ಅನುದಾನದಲ್ಲಿ 18 ಲಕ್ಷ ರೂ.ಗಳಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಪ್ರವಾಸಿ ಮಂದಿರ ರಸ್ತೆಯಲ್ಲಿರುವ ಕಾಂಪೌಂಡ್ ಮತ್ತು ಚಳ್ಳಕೆರೆ ರಸ್ತೆಗೆ ಹೋಗುವ ಪಕ್ಕದಲ್ಲಿರುವ ಕಾಂಪೌಂಡ್ ಅನ್ನು ಎತ್ತರವಾಗಿ ಕಟ್ಟಿ ಮೈದಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ನಮ್ಮ ತಾಲ್ಲೂಕಿಗೆ ಇಂತಹ ಒಂದು ಸುಸಜ್ಜಿತವಾದ ಮೈದಾನ ಬೇಕಿತ್ತು. ಈಗ ನನ್ನ ಅನುದಾನದಲ್ಲಿ ಈ ಮೈದಾನದ ಅಭಿವೃದ್ಧಿ ಮಾಡುತ್ತಿದ್ದೇನೆ. ರಾಜಕೀಯ ಪಕ್ಷಗಳ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರು ಮತ್ತು ಕ್ರೀಡಾಪಟುಗಳು ಕಾಮಗಾರಿ ಯಾವಾಗ ಮುಗಿಯುತ್ತದೆ ಎಂದು ಕಾತುರದಿಂದ ಕಾಯುತ್ತಿದ್ದಾರೆ ಎಂದು ಶಾಸಕರು ತಿಳಿಸಿದರು.
ದ್ವಿಮುಖ ರಸ್ತೆ ಕಾಮಗಾರಿಯ ಪ್ರಗತಿಯ ಬಗ್ಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜು ಡಿ.ಬಣಕಾರ್ ಮತ್ತು ಪಟ್ಟಣ ಪಂಚಾಯತಿಯ ಇಂಜಿನಿಯರ್ ತಿಪ್ಪೇಶಪ್ಪ ಅವರು ಶಾಸಕರಿಗೆ ಮಾಹಿತಿ ನೀಡಿದರು.