ಮನೆಗೆಲಸದ ಮಹಿಳೆಯರಿಂದ ಪ್ರತಿಭಟನೆ

ದಾವಣಗೆರೆ ಜೂ.25- ತಮ್ಮ ವಿವಿಧ ಬೇಡಿಕೆ ಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ ಎಸ್) ನೇತೃತ್ವದಲ್ಲಿ ಮನೆಗೆಲಸದ ಮಹಿಳೆಯರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಇಂದು ಪ್ರತಿಭಟಿಸಿ, ನಂತರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. 

ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಘೋಷಿಸಲಾಗಿದ್ದ ಲಾಕ್‌ಡೌನ್‌ನಿಂದ ಹಲವಾರು ಅಸಂಘಟಿತ ಕಾರ್ಮಿಕರು ತಮ್ಮ ಜೀವ ನೋಪಾಯವನ್ನು ಕಳೆದುಕೊಂಡಿದ್ದಾರೆ. ಮನೆಗೆಲಸ ಮಾಡಿ ಜೀವನ ನಿರ್ವಹಿಸುವ ಮಹಿಳೆಯರು ಕೂಡ ಈ ಗುಂಪಿಗೆ ಸೇರಿದ್ದು, ಕಳೆದ ಎರಡು-ಮೂರು ತಿಂಗಳು ಕೆಲಸಕ್ಕೆ ಹೋಗಲು ಸಾಧ್ಯವಾಗದೆ, ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಅವರಲ್ಲಿ ಹಲವಾರು ಮಂದಿ ಅಂಬೇಡ್ಕರ್ ಸಹಾಯ ಹಸ್ತ ಯೋಜನೆ ಯಡಿಯಲ್ಲಿಯೂ ಸಹ ನೋಂದಾಯಿಸಿಕೊಂಡಿ ದ್ದಾರೆ. ಈ ಸಮಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯು ಹೆಚ್ಚಾಗುತ್ತಿರುವಾಗ ಈ ಹಿಂದೆ ಮನೆಗೆಲಸ ಮಾಡುತ್ತಿದ್ದ ಎಷ್ಟೋ ಮನೆಗಳಲ್ಲಿ ಕೆಲಸಕ್ಕೆ ಬಾರದಿರುವಂತೆ ತಿಳಿಸಿದ್ದಾರೆ ಎಂದು ಪ್ರತಿಭಟನಾಕಾರರು ಅಳಲಿಟ್ಟರು.

ಮನೆಗೆಲಸ ಮಾಡುವ ಮಹಿಳೆಯರಿಗೆ ಆಹಾರ ಧಾನ್ಯಗಳ ಕಿಟ್‍ಗಳನ್ನು ವಿತರಿಸಬೇಕು. ಸರ್ಕಾರ ತನ್ನ ಬಜೆಟ್‍ನಲ್ಲಿ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಗೆ ಹಣ ಒದಗಿಸಿ ಇತರೆ ಕಾರ್ಮಿಕರಿಗೆ ಕೋವಿಡ್-19 ಸಹಾಯ ಧನ ನೀಡಿದಂತೆ, ಮನೆಗೆ ಲಸದ ಮಹಿಳೆಯರಿಗೂ ನೀಡಬೇಕು. ಜೊತೆಗೆ ಅವರು ಮನೆ ಕೆಲಸಕ್ಕಾಗಿ ಬೇರೆ ಬೇರೆ ಪ್ರದೇಶ, ಬಡಾವಣೆಗಳಿಗೆ ಹೋಗುವುದರಿಂದ ಅವರಿಗೆ ಬಸ್‍ಪಾಸನ್ನು ರಿಯಾಯಿತಿ ದರದಲ್ಲಿ ನೀಡ ಬೇಕು. ಮನೆಗೆಲಸ ಮಾಡುವ ಹೆಣ್ಣು ಮಕ್ಕಳನ್ನು ಗುರುತಿಸಿ, ಸ್ಮಾರ್ಟ್ ಕಾರ್ಡ್ ವಿತರಿಸಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಅಡಿಯಲ್ಲಿ ಅವರ ಕುಟುಂಬಗಳಿಗೆ ಕಲ್ಯಾಣ ಯೋಜನೆಗಳ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ರಾದ ಜ್ಯೋತಿ ಕುಕ್ಕುವಾಡ, ಜಿಲ್ಲಾ ಕಾರ್ಯದರ್ಶಿ ಕೆ. ಭಾರತಿ, ಜಿಲ್ಲಾ ಸಮಿತಿ ಸದಸ್ಯೆಯರಾದ ಮಮತ, ಪ್ರೇಮ, ಚಂದ್ರಮ್ಮ, ಗಂಗಮ್ಮ, ನಾಗಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!