ಬಾಕಿ ವೇತನಕ್ಕೆ ಅತಿಥಿ ಉಪನ್ಯಾಸಕರ ಆಗ್ರಹ

ದಾವಣಗೆರೆ ಜೂ.25- ಅತಿಥಿ ಉಪನ್ಯಾಸ ಕರ, ಶಿಕ್ಷಕರ ಬಾಕಿ ವೇತನವನ್ನು ಕೂಡಲೇ ಬಿಡುಗಡೆ ಮತ್ತು ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಲು ಆಗ್ರಹಿಸಿ, ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ, ಶಿಕ್ಷಕರ ಹೋರಾಟ ಸಮಿತಿ, ಆಲ್‍ ಇಂಡಿಯಾ ಡೆಮಾಕ್ರೆಟಿಕ್‍ ಯೂತ್‍ ಆರ್ಗನೈಸೇಷನ್ (ಎಐಡಿವೈಓ) ಜಿಲ್ಲಾ ಸಮಿತಿ ಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಇಂದು ಪ್ರತಿಭಟಿಸಿ, ಜಿಲ್ಲಾಡಳಿತದ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿರುವ 413 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ದುಡಿಯುತ್ತಿದ್ದಾರೆ. 2019ರ ಜುಲೈನಲ್ಲಿ 10 ಮತ್ತು 12ನೇ ತರಗತಿಗಳಿಗೆ ಪಾಠ ಮಾಡಲು 22,150 ಅತಿಥಿ ಶಿಕ್ಷಕರ ಅಗತ್ಯವನ್ನು ತೋರಿಸಲಾಗಿತ್ತು. ಇನ್ನು ನಿಖರವಾಗಿ ವಿವಿಧ ಹಂತಗಳ ಶಿಕ್ಷಣ ಕ್ಷೇತ್ರದಲ್ಲಿ ಎಷ್ಟೆಷ್ಟು ಮಂದಿ ‘ಅತಿಥಿ’ ಶಿಕ್ಷಕರಾಗಿ ದುಡಿಯುತ್ತಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಒಟ್ಟಿನಲ್ಲಿ ಸಾವಿರಾರು ಅತಿಥಿ ಉಪನ್ಯಾಸಕರು ಮತ್ತು ಅತಿಥಿ ಶಿಕ್ಷಕರು ರಾಜ್ಯದೆಲ್ಲೆಡೆ ದುಡಿಯುತ್ತಿದ್ದಾರೆ. ಈಗಂತೂ ತಮ್ಮ ಕೈಯ್ಯಿಂದಲೇ ಖರ್ಚು ಭರಿಸುತ್ತಾ, ಆನ್‍ಲೈನ್ ತರಗತಿಗಳನ್ನೂ ಅವರು ನಿಭಾಯಿಸುತ್ತಿದ್ದಾರೆ. ಕೆಲವರು 20-25 ವರ್ಷಗಳಿಂದ ನಿರಂತರವಾಗಿ ‘ಅತಿಥಿ’ಗಳಾಗಿಯೇ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಈ ಸಂದರ್ಭದಲ್ಲಿ ಎಐಡಿವೈಓ ಜಿಲ್ಲಾ ಉಪಾಧ್ಯಕ್ಷ ಮಧು ತೊಗಲೇರಿ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!