ಎಸ್ಸೆಸ್ಸೆಲ್ಸಿ ಪರೀಕ್ಷಾ ಹಂತ ಪ್ರಮುಖ ಘಟ್ಟ

ಹೊನ್ನಾಳಿಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ, ಜೂ.23- ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಮುಖ ಘಟ್ಟ. 1ರಿಂದ 9ನೇ ತರಗತಿವರೆಗೆ ಯಾವುದೇ ಅಡ್ಡಿ – ಆತಂಕಗಳಿಲ್ಲದೇ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಹೋಗುತ್ತಾರೆ. ಆದರೆ, 10ನೇ ತರಗತಿಯಲ್ಲಿ ಆರಂಭದಿಂದಲೇ ಟೆಸ್ಟ್‌ಗಳು, ತರಬೇತಿಗಳು, ಟ್ಯೂಷನ್‌ ನಡೆಸಲಾಗುತ್ತದೆ. ಅನುಭವಿ ಶಿಕ್ಷಕರುಗಳಿಂದ ಪರೀಕ್ಷೆ ಭಯ ಕುರಿತು ಶಿಬಿರಗಳನ್ನು ನಡೆಸಲಾಗುತ್ತದೆ. ಕಾರಣ ಇದು ವಿದ್ಯಾರ್ಥಿ ಜೀವನದಲ್ಲಿ ಒಂದು ಟರ್ನಿಂಗ್ ಪಾಯಿಂಟ್ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಇಲ್ಲಿನ ಗುರುಭವನದಲ್ಲಿ ಇಂದು ಏರ್ಪಾಡಾಗಿದ್ದ ನಾಡಿದ್ದು ದಿನಾಂಕ 25 ರಿಂದ ಆರಂಭವಾಗುವ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮಾಸ್ಕ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

ಏಪ್ರಿಲ್ ತಿಂಗಳಲ್ಲಿ ನಡೆಯಬೇಕಾದ ಎಸ್ಸೆ ಸ್ಸೆಲ್ಸಿ ಪರೀಕ್ಷೆಯನ್ನು ಕೊರೊನಾದಿಂದ ಎರಡು ತಿಂಗಳು ಮುಂದಕ್ಕೆ ಹಾಕಲಾಯಿತು. ಈಗಲೂ ಈ ಭಯ ನಮ್ಮಿಂದ ದೂರವಾಗಿಲ್ಲ. ಆದರೂ ಸಹ ಪರೀಕ್ಷೆಯನ್ನು ನಡೆಸಲೇಬೇಕಾದ ಒತ್ತಡದಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಅದಕ್ಕಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಶಿಕ್ಷಣ ಇಲಾಖೆ ಎಚ್ಚರಿಕೆಯಿಂದ ಯಶಸ್ವಿಯಾಗಿ ಪರೀಕ್ಷೆಗಳನ್ನು ಮುಗಿಸಿಕೊಡಬೇಕು. ಯಾವುದೇ ಅಪಸ್ವರಗಳು ಕೇಳಿಬರಬಾರದು ಎಂದರು.

ಪರೀಕ್ಷೆಗೆ 2946 ವಿದ್ಯಾರ್ಥಿಗಳು : ಹೊನ್ನಾಳಿ ಬ್ಲಾಕ್‌ನಲ್ಲಿ 10 ಪರೀಕ್ಷಾ ಕೇಂದ್ರಗಳು ಮತ್ತು 2 ಉಪ ಕೇಂದ್ರಗಳಿವೆ. ಹೊಸದಾಗಿ 1238 ಬಾಲಕರು, 1463 ಬಾಲಕಿಯರು ಸೇರಿ ಒಟ್ಟು 2701 ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳು ಒಟ್ಟು 150, ವಲಸೆ ಬಂದವರು 95 ಸೇರಿ ಒಟ್ಟು 2946 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.

-ಜಿ.ಇ. ರಾಜೀವ್, ಶಿಕ್ಷಣಾಧಿಕಾರಿ

ಶಿಕ್ಷಣಾಧಿಕಾರಿ ಜಿ.ಇ.ರಾಜೀವ್ ಮಾತ ನಾಡಿ, ಈ ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರ ದಲ್ಲಿ ಆಸನಗಳ ವ್ಯವಸ್ಥೆ, ಗ್ರಾಮೀಣ ವಿದ್ಯಾರ್ಥಿ ಗಳಿಗೆ ಬಸ್‌ಗಳ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಕೊರೊನಾ ವಾರಿಯರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಪರೀಕ್ಷೆ ಬರೆಯುವವರಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಒಟ್ಟಿನಲ್ಲಿ ವಿದ್ಯಾರ್ಥಿಗಳು ರಕ್ಷಣಾತ್ಮಕವಾಗಿ ಇರಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ತಾ.ಪಂ. ಪ್ರಭಾರಿ ಅಧ್ಯಕ್ಷ ಕೆ.ಎಲ್.ರಂಗಪ್ಪ, ಸದಸ್ಯ ರವಿಕುಮಾರ್, ಎಪಿಎಂಸಿ ಅಧ್ಯಕ್ಷ ಸುರೇಶ್ ಮಾತನಾಡಿದರು. ಸಭೆಯಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್, ಮುಖ್ಯಶಿಕ್ಷಕ ಹೆಚ್.ತಿಪ್ಪೇಶಪ್ಪ, ಇಸಿಒ ಸಿದ್ದಪ್ಪ, ಬಸವರಾಜಪ್ಪ ಮತ್ತಿತರರು ಹಾಜರಿದ್ದರು.

error: Content is protected !!