ರಾಣೇಬೆನ್ನೂರು, ಜೂ. 23- ಇಲ್ಲಿನ ಮಾರುತಿ ನಗರದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವ್ಯಕ್ತಿ ವಾಸವಾಗಿರುವ ಮನೆ ಸೇರಿದಂತೆ ಸುತ್ತಮುತ್ತಲಿನ 24 ಮನೆಗಳನ್ನು ಒಳಗೊಂಡು ಹಾಗೂ 100 ಮೀಟರ್ ಒಳಗಿನ ಪ್ರದೇಶವನ್ನು ಕಂಟೈನ್‍ಮೆಂಟ್ ಝೋನ್ ಆಗಿ ಗುರುತಿಸಿ ಸೀಲ್‍ಡೌನ್ ಮಾಡಲಾಗಿದೆ.
ಸ್ಥಳಕ್ಕೆ ಅಧಿಕಾರಿಗಳ ಭೇಟಿ: ಕೊರೊನಾ ಸೋಂಕು ತಗುಲಿರುವ ವ್ಯಕ್ತಿಯು ವಾಸವಾಗಿರುವ ಮಾರುತಿ ನಗರ, ದೊಡ್ಡಪೇಟೆ ಬಟ್ಟೆ ಅಂಗಡಿಗೆ ಹಾಗೂ ಆಸ್ಪತ್ರೆಯ ಪ್ರದೇಶಗಳಿಗೆ ಅಪರ ಜಿಲ್ಲಾಧಿಕಾರಿ ಎಂ.ಯೋಗೀಶ್ವರ್, ಹೆಚ್ಚುವರಿ ಎಸ್.ಪಿ.ಮಲ್ಲಿಕಾರ್ಜುನ ಬಾಲ ದಂಡಿ, ಉಪವಿಭಾಗಾಧಿಕಾರಿ ಡಾ.ದಿಲೀಪ ಶಶಿ, ಡಿವೈಎಸ್‍ಪಿ ಟಿ.ಸುರೇಶ್, ತಹಶೀಲ್ದಾರ್ ಬಸವನಗೌಡ ಕೋಟೂರು, ತಾಲ್ಲೂಕು ವೈದ್ಯಾಧಿಕಾರಿ ಡಾ.ಸಂತೋಷ್ ಒಳಗೊಂಡ ತಂಡ ಭೇಟಿ ನೀಡಿ ಮುನ್ನೆಚ್ಚರಿಕ್ಕೆ ಕ್ರಮಗಳನ್ನು ಕೈಗೊಂಡರು. ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಸೋಂಕು ನಿವಾರಕವನ್ನು ಸಿಂಪರಿಸಲಾಯಿತು.
ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ: ಮಾರುತಿ ನಗರದ 24 ಮನೆಗಳು ಹಾಗೂ ಆಸ್ಪತ್ರೆಯಲ್ಲಿರುವ ಕ್ವಾರಂಟೈನ್ ಜನರಿಗೆ ನಿತ್ಯ ಅಗತ್ಯ ವಸ್ತುಗಳ ಪೂರೈಕೆಗೆ ನಗರಸಭೆ ಸಿಬ್ಬಂದಿಗಳನ್ನು ನೇಮಿಸಲಾಗಿದೆ.