ಹರಿಹರ, ಜೂ.22- ನಗರದಲ್ಲಿ ಆರು ಮತ್ತು ತಾಲ್ಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಮೂವರು ವ್ಯಕ್ತಿಗಳಿಗೆ ಕೊರೊನಾ ಸೋಂಕು ಹರಡಿರುವುದರಿಂದ ಮುಂದಿನ ದಿನಗಳಲ್ಲಿ ಕೊರೊನಾ ಹೆಚ್ಚಾಗಿ ಹರಡದಂತೆ ತಡೆಗಟ್ಟಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ತಿಳಿಸಿದರು.
ವಿಶ್ವದಾದ್ಯಂತ ಮಾರಕವಾಗಿ ಹರಡಿರುವ ಕೊರೊನಾ ವೈರಸ್ ರೋಗದ ಬಾಧೆ ಹರಿಹರ ತಾಲ್ಲೂಕಿನಲ್ಲಿ ಮಾತ್ರ ಇದುವರೆಗೆ ಕಾಣಿಸಿಕೊಂಡಿರಲಿಲ್ಲ. ಆದರೆ, ಇವತ್ತು ನಗರದಲ್ಲಿ ಆರು ಜನರಿಗೆ ಹರಡುವ ಮೂಲಕ ಇಲ್ಲಿನ ನಗರಕ್ಕೆ ಕಾಲಿಟ್ಟಿದ್ದು, ಇದನ್ನು ನಿಯಂತ್ರಣಕ್ಕೆ ತರುವುದಕ್ಕೆ ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ, ನಗರಸಭೆ, ತಾ.ಪಂ ಕಚೇರಿ ಸೇರಿದಂತೆ ಇತರೆ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಶ್ರಮಿಸುವುದಕ್ಕೆ ಸಿದ್ದವಾಗಿವೆ.
ಶಿವಮೊಗ್ಗ ರಸ್ತೆಯಲ್ಲಿ ಇರುವ ಕೆಲವು ಕೊರೊನಾ ರೋಗವಿರುವ ವ್ಯಕ್ತಿಗಳ ಮನೆಯ ಮುಂದೆ ಮತ್ತು ಅಗಸರ ಬಡಾವಣೆಯಲ್ಲಿ ಸಾರ್ವಜನಿಕರೂ ಸಹ ಹೆಚ್ಚಾಗಿ ಓಡಾಟ ಮಾಡದಂತೆ ಬ್ಯಾರಿಕೇಡ್ ಹಾಕಲಾಗಿದೆ. ಈಗ ಕೊರೊನಾ ಸೋಂಕು ತಗುಲಿದ ವ್ಯಕ್ತಿಗಳು ಯಾರ ಯಾರ ಜೊತೆಯಲ್ಲಿ ಅತಿಯಾಗಿ ಸಂಪರ್ಕವನ್ನು ಹೊಂದಿದ್ದರೋ ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಕೊರೊನಾ ವಾರ್ಡ್‌ನಲ್ಲಿ ತಪಾಸಣೆ ಮಾಡಲಾಗುತ್ತಿದೆ. ಯಾವುದೇ ವ್ಯಕ್ತಿಗಳು ಬೇರೆ ನಗರದಿಂದ ಆಗಮಿಸಿದ್ದರೆ ಸಾರ್ವಜನಿಕರು ತಕ್ಷಣವೇ ಅವರ ಬಗ್ಗೆ ಮಾಹಿತಿ ನೀಡಬೇಕು. ಇದರಿಂದಾಗಿ ಸೋಂಕು ಹೆಚ್ಚಾಗಿ ಹರಡದಂತೆ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪೌರಾಯುಕ್ತರಾದ ಶ್ರೀಮತಿ ಎಸ್.ಲಕ್ಷ್ಮೀ ಮಾತನಾಡಿ, ಸೋಂಕು ಹರಡಿರುವ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ರೋಗ ನಿರೋಧಕ ಔಷಧಿಯನ್ನು ನಗರಸಭೆ ಸಿಬ್ಬಂದಿಗಳೊಂದಿಗೆ ಸಿಂಪಡಣೆ ಮಾಡಲಾಗಿದೆ. ಕೊರೊನಾ ಶಂಕಿತ ವ್ಯಕ್ತಿಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅವರಿಗೆ ಗಂಟಲ ಕಫವನ್ನು ತೆಗೆಸಿ, ಲ್ಯಾಬ್‌ಗೆ ತಪಾಸಣೆಗೆ ಕಳಿಸಿಕೊಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ರಾಘವನ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್, ಪಿಎಸ್ಐ ಎಸ್.ಶೈಲಾಶ್ರೀ, ನಗರಸಭೆ ಎಇಇ ಬಿರಾದಾರ್ ಸೇರಿದಂತೆ ಇತರರು ಇದ್ದರು.