ಕಾಡಜ್ಜಿ : ಸಾಲ ವಿತರಣೆ ಕಾರ್ಯಕ್ರಮದಲ್ಲಿ ಡಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೆ.ಆರ್.ಷಣ್ಮುಖಪ್ಪ
ದಾವಣಗೆರೆ, ಜೂ.22- ಕಾಯಕ ಯೋಜನೆಯಡಿ ಗ್ರಾಮಾಂತರ ಪ್ರದೇಶಗಳಲ್ಲಿ 10 ಮಂದಿ ಮಹಿಳೆಯರು ಸೇರಿಕೊಂಡು ಸ್ವಸಹಾಯ ಸಂಘಗಳನ್ನು ರಚಿಸಿಕೊಂಡು ಗುಡಿ ಕೈಗಾರಿಕೆ ಮಾಡಲು ಮುಂದಾದರೆ, ಡಿಸಿಸಿ ಬ್ಯಾಂಕ್ನಿಂದ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡಲಾಗುವುದು ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜೆ.ಆರ್.ಷಣ್ಮುಖಪ್ಪ ತಿಳಿಸಿದರು.
ತಾಲ್ಲೂಕಿನ ಕಾಡಜ್ಜಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ಕಳೆದ ವಾರ ಹಮ್ಮಿಕೊಂಡಿದ್ದ ಸಾಲ ವಿತರಣಾ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಡಜ್ಜಿ ಗ್ರಾಮದಲ್ಲಿ ಮಹಿಳೆಯರು ಕಾಯಕ ಯೋಜನೆಯಡಿ ಕನಿಷ್ಠ ಐದು ಸ್ವಸಹಾಯ ಸಂಘಗಳನ್ನು ರಚಿಸಿಕೊಂಡು, ಗುಡಿ ಕೈಗಾರಿಕೆ ಆರಂಭಿಸಿದರೆ ಸಾಲ ನೀಡಲಾಗುವುದು. ಇದು ಬಡ್ಡಿ ರಹಿತ ಸಾಲವಾಗಿದ್ದು, ತೀರಿಸಲು 5 ವರ್ಷಗಳ ಕಾಲಾವಕಾಶವಿರುತ್ತದೆ. ಒಂದು ವೇಳೆ 5 ಲಕ್ಷದಿಂದ 10 ಲಕ್ಷದವರೆಗೆ ಸಾಲ ಬೇಕಾದರೆ ಶೇ. 4 ರಂತೆ ಬಡ್ಡಿ ವಿಧಿಸಲಾಗುವುದು ಎಂದು ಮಾಹಿತಿ ನೀಡುತ್ತಾ, ನಿಮಗೆ ಡಿಸಿಸಿ ಬ್ಯಾಂಕ್ ಬೆನ್ನೆಲುಬಾಗಿ ಇರುತ್ತದೆ. ಅಭಿವೃದ್ಧಿಯತ್ತ ಗಮನ ಹರಿಸಿರಿ ಎಂದು ಸಲಹೆ ನೀಡಿದರು.
ಸ್ವಸಹಾಯ ಸಂಘಗಳು ಗುಡಿ ಕೈಗಾರಿಕೆಗಳಾದ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಶ್ಯಾವಿಗೆ, ರೊಟ್ಟಿ, ಊದುಬತ್ತಿ, ಮೇಣದಬತ್ತಿ, ಅಡಿಕೆ ತಟ್ಟೆ ತಯಾರಿಸುವ ಗುಡಿ ಕೈಗಾರಿಕೆಗಳನ್ನು ಆರಂಭಿಸಬೇಕು ಎಂದು ಕರೆ ನೀಡಿದರು.
ಸರ್ಕಾರ ಬೆಂಬಲ ಬೆಲೆ ಘೋಷಿಸಿದಾಗ ಅದರ ಪ್ರಯೋಜನ ದಲ್ಲಾಳಿಗಳು, ವರ್ತಕರು, ಮಧ್ಯವರ್ತಿಗಳಿಗೆ ಸಿಗುತ್ತದೆಯೇ ಹೊರತು, ನಿಜ ವಾದ ರೈತನಿಗೆ ಅನುಕೂಲವಾಗುವುದಿಲ್ಲ. ಕೈಗಾ ರಿಕಾ ಉತ್ಪನ್ನಗಳಿಗೆ ಯಾವ ರೀತಿ ಎಂಆರ್ಪಿ ಬೆಲೆ ಇರುತ್ತೋ, ಅದೇ ರೀತಿ ರೈತನ ಬೆಳೆಗೆ ನಿಗದಿಯಾ ಗಬೇಕು. ಸರ್ಕಾರ ಮುಂದೆ ಬಂದು ಬೆಳೆ ಖರೀದಿ ಮಾಡಬೇಕು. ಆಗ ರೈತ ಉದ್ಧಾರವಾಗುತ್ತಾನೆ. ಆತನ ಜೀವನ ಪಾವನವಾಗುತ್ತದೆ ಎಂದರು. ರೈತರ ಬೆಳೆಗೆ ಸರಿಯಾದ ಬೆಲೆ ಇಲ್ಲದಿದ್ದಾಗ ಬೆಳೆಯನ್ನು ಸಂಗ್ರಹಣೆ ಮಾಡಿಕೊಂಡು, ಆತನಿಗೆ ಪ್ಲೆಡ್ಜ್ ಲೋನ್ ಕೊಡುವ ಮತ್ತು ಉತ್ತಮ ಬೆಲೆ ಬಂದಾಗ ಬೆಳೆ ಮಾರುವ ವ್ಯವಸ್ಥೆಯಾಗಬೇಕು ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಮಂಜುನಾಥ ಕಾಡಜ್ಜಿ ಮಾತನಾಡಿ, ಪ್ರಸಕ್ತ ಸಂದರ್ಭದಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರ ಜೀವನ ಬಹಳ ಕಷ್ಟವಾಗಿದೆ. ಅವರು ತಮ್ಮ ಬೆಳೆ ಮಾರಾಟ ಮಾಡಿದಾಗ ಸಿಗುವ ಹಣ ಬೆಳೆ ಬೆಳೆಯಲು ಅವರು ಮಾಡುವ ವೆಚ್ಚದಷ್ಟೂ ಇರುವುದಿಲ್ಲ. ಹೀಗಾಗಿ ಕೃಷಿಯಿಂದ ವಿಮುಖರಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರಪ್ಪ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಮೇಶಯ್ಯ ವಹಿಸಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಜಿ. ಚಂದ್ರಪ್ಪ, ಉಪಾಧ್ಯಕ್ಷರಾದ ಸುಧಾ ಕರಿಬಸಪ್ಪ, ಸೊಸೈಟಿ ಉಪಾಧ್ಯಕ್ಷ ಹನುಮಂತಪ್ಪ, ನಿರ್ದೇಶಕರಾದ ಲೋಕಪ್ಪ, ದ್ಯಾಮಪ್ಪ, ನಾಗಣ್ಣ, ಶಿವಣ್ಣ, ದಸ್ತಗೀರ್, ಗುರು ಸಿದ್ದಪ್ಪ, ಪ್ರಭುದೇವ್, ಸೊಸೈಟಿ ಕಾರ್ಯದರ್ಶಿ ಶಿವಕುಮಾರ್ ಮತ್ತಿತರರು ಇದ್ದರು.
ರೈತ ಮುಖಂಡ ಪ್ರಕಾಶ್ ಸ್ವಾಗತಿಸಿದರು. ಗ್ರಾಮದ ಮುಖಂಡ ನಾಗರಾಜಯ್ಯ ಕಾರ್ಯಕ್ರಮ ನಿರೂಪಿಸಿದರು.