ಮಲೇಬೆನ್ನೂರು : ಅಧಿಕಾರಿಗಳಿಗೆ ವೈದ್ಯಾಧಿಕಾರಿ ಡಾ|| ಲಕ್ಷ್ಮಿದೇವಿ ಸೂಚನೆ
ಮಲೇಬೆನ್ನೂರು, ಜೂ.22- ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಖಾಸಗಿ ಆಸ್ಪತ್ರೆ, ಕ್ಲಿನಿಕ್ಗಳ ವೈದ್ಯರ ಸಭೆಯನ್ನು ಸೋಮವಾರ ಪುರಸಭೆಯ ಸಭಾಂಗಣದಲ್ಲಿ ನಡೆಸಲಾಯಿತು.
ಖಾಸಗಿ ಆಸ್ಪತ್ರೆ, ಕ್ಲಿನಿಕ್ಗಳಿಗೆ ಚಿಕಿತ್ಸೆಗಾಗಿ ಬರುವ ರೋಗಿಗಳಲ್ಲಿ ಕೋವಿಡ್-19 ಕ್ಕೆ ಸಂಬಂಧಿಸಿದ ಐಎಲ್ಐ ಮತ್ತು ಎಸ್ಎಆರ್ಐ ಲಕ್ಷಣಗಳು ಕಂಡು ಬಂದಲ್ಲಿ ಅಂತಹವರ ವಿವರವನ್ನು ನಿಗದಿತ ವೆಬ್ ಪೋರ್ಟಲ್ನಲ್ಲಿ ಪ್ರತಿದಿನ ಕಡ್ಡಾಯವಾಗಿ ದಾಖಲಿಸುವಂತೆ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ ಅವರು ಹೇಳಿದರು.
ಸಭೆಯಲ್ಲಿ ಹಾಜರಿದ್ದ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಬಿ. ಚಂದ್ರಶೇಖರ್, ಹಿರಿಯ ವೈದ್ಯರಾದ ಡಾ. ಎಂ.ಹನುಮಂತಪ್ಪ, ಡಾ. ಟಿ. ಬಸವರಾಜ್, ಮಕ್ಕಳ ತಜ್ಞ ಡಾ. ಶ್ರೀನಿವಾಸ್ ಅವರುಗಳು ಮಾತನಾಡಿದರು. ಖಾಸಗಿ ಆಸ್ಪತ್ರೆ, ಕ್ಲಿನಿಕ್ಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ, ಸಿಬ್ಬಂದಿಗೆ ಪಿಪಿಇ ಕಿಟ್ಗಳನ್ನು ನೀಡುವಂತೆ ಮನವಿ ಮಾಡಿದರು.
ವೈದ್ಯರಾದ ಡಾ. ಪ್ರಕಾಶ್, ದಂತ ವೈದ್ಯ ಡಾ. ಶೈಲೇಶ್, ಡಾ. ಸ್ವಾಮಿ, ಪುರಸಭೆಯ ಆರೋಗ್ಯಾಧಿಕಾರಿ ಗುರುಪ್ರಸಾದ್, ಪರಿಸರ ಇಂಜಿನಿಯರ್ ಉಮೇಶ್, ನವೀನ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.