ರೈತರಿಗೆ ಸಂಸದ ಸಿದ್ದೇಶ್ವರ ಸಲಹೆ, 22 ಕೆರೆ ನೀರು ತುಂಬಿಸುವ ಯೋಜನೆಗೆ ಚಾಲನೆ
ಹರಿಹರ, ಜೂ.22- ಯಾವುದೇ ತೊಂದರೆ ಆಗದಂತೆ 22 ಕೆರೆಗಳಿಗೆ ನೀರು ತುಂಬಿಸಿ ರೈತರಿಗೆ ನೀರು ಕೊಡುವ ಕೆಲಸವನ್ನು ಮಾಡಲಾಗುತ್ತದೆ. ರೈತರು ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ಹೇಳಿದರು.
ನಗರದ ಹೊರ ವಲಯದ ರಾಜನಹಳ್ಳಿ ಗ್ರಾಮದ ಬಳಿ ಇರುವ 22 ಕೆರೆ ನೀರು ಸರಬರಾಜು ಕೇಂದ್ರದಲ್ಲಿ 22 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮಸ್ಥರು ಕೂಡ ಅಧಿಕಾರಿಗಳ ಸೂಚನೆ ಏನು ಇರುತ್ತದೋ ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ ನೀರನ್ನು ಪಡೆಯುವುದಕ್ಕೆ ರೈತರು ಮುಂದಾಗಬೇಕು. ನಮ್ಮದು ಬೇಗನೆ ಆಗಬೇಕು ಎಂದು ತಾವೇ ವಾಲ್ ಓಪನ್ ಮಾಡುವುದಕ್ಕೆ ಅಥವಾ ಒಡೆಯುವುದು ಈ ರೀತಿಯಲ್ಲಿ ಕೈ ಚಳಕ ಮಾಡಿದರೆ 180 ದಿನಕ್ಕೆ ಕಟ್ ಮಾಡಿಸುವ ಸಂದರ್ಭ ಬರುತ್ತದೆ ಎಂದು ಎಚ್ಚರಿಸಿದರು.
ಹಿಂದೆ ಸರ್ಕಾರವು ಶೇ. 50 ರಷ್ಟು ಮಾತ್ರ ಕೆರೆಯನ್ನು ತುಂಬಿಸುವ ಕಾರ್ಯವನ್ನು ಮಾಡು ತ್ತಿತ್ತು. ಆದರೆ ಈ ಬಾರಿ ಶೇ. 75 ರಷ್ಟು ಮುಂದಾಗಿ ರುವುದು ಶ್ಲಾಘನೀಯ ಕಾರ್ಯವಾಗಿದೆ. ಇದರಿಂದಾಗಿ ಅಂತರ್ಜಲ ಮಟ್ಟವನ್ನು ಹೆಚ್ಚೂತ್ತದೆ ಮತ್ತು ಕುಡಿಯುವ ನೀರಿನ ಅಭಾವ ಕಡಿಮೆಯಾಗಿ ಸರ್ಕಾರದ ಲಕ್ಷಾಂತರ ರೂಪಾಯಿ ಹಣ ಉಳಿತಾಯವಾ ಗುತ್ತದೆ. ಆದ್ದರಿಂದ ಇದನ್ನು ರೈತರು ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು.
22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹತ್ತು ವರ್ಷದ ಯೋಜನೆಯಾಗಿದ್ದು ಕಳೆದ ಆರು ವರ್ಷಗಳಿಂದ ಚಾಲನೆಗೆ ಬಂದಿದೆ. ಆದರೂ ಸಹ ಒಂದು ಸಾರಿ ಕೂಡಾ ಕೆರೆ ತುಂಬಿಸಲು ಸಾಧ್ಯವಾಗಲಿಲ್ಲ. ಹಲವಾರು ಕಾರಣಗಳನ್ನು ಅಧಿಕಾರಿಗಳು ಹೇಳಿದ್ದರಿಂದ ನೆನೆಗುದಿಗೆ ಬೀಳುವ ಕೆಲಸವಾಗಿತ್ತು.
ಇದರಿಂದಾಗಿ ರೈತರಿಗೆ ಕೊಟ್ಟ ಆಶ್ವಾಸನೆ ಈಡೇರಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರ ಸಮಕ್ಷಮ ಎಲ್ಲಾ ಮುಖಂಡರು ಮತ್ತು ಅಧಿಕಾರಿಗಳು ಸಭೆ ಮಾಡಿ ಈ ಬಾರಿ ತುಂಬಿಸಬೇಕು ಎಂಬ ತೀರ್ಮಾನವನ್ನು ತೆಗೆದುಕೊಂಡು 22 ನೇ ತಾರೀಖು ಚಾಲನೆ ನೀಡಬೇಕೆಂದು ತಾಕೀತು ಮಾಡಲಾಯಿತು. ಆದರಂತೆ ಜಿಲ್ಲಾಧಿಕಾರಿಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಸ್ಪಂದಿಸಿರುವುದರಿಂದ ಇಂದು ಚಾಲನೆ ನೀಡಲಾಯಿತು ಎಂದರು.
ಸಿರಿಗೆರೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಮುತುವರ್ಜಿಯಿಂದ ಈ 22 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ದೊರಕಿದೆ. ಈ ಬಾರಿ ಕೂಡಾ ಅವರಿಂದ ಚಾಲನೆ ಕೊಡುವುದಕ್ಕೆ ಸಿದ್ದತೆ ಮಾಡಲಾಗಿತ್ತು.
ಆದರೆ ಕೊರೊನಾ ವೈರಸ್ ಸಮಸ್ಯೆ ಯಿಂದ ಜಗದ್ಗುರುಗಳು ಮಠವನ್ನು ಬಿಟ್ಟು ಎಲ್ಲೂ ಹೊರಗಡೆ ಹೋಗದೇ ಇರುವುದರಿಂದ ಇಂದು ಅವರ ಆಶೀರ್ವಾದದ ಬಲದಿಂದ ಚಾಲನೆ ನೀಡಲಾಯಿತು ಎಂದು ಹೇಳಿದರು.
ನರಗನಹಳ್ಳಿ ರೈತರು ನಾವು ಇದುವರೆಗೂ ನೀರನ್ನು ನೋಡಿಲ್ಲ ಅಂತ ದೂರುತ್ತಾರೆ. ಅದರ ಬಗ್ಗೆ ಗಮನವನ್ನು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಎಸ್.ಎ. ರವೀಂದ್ರನಾಥ್, ಎಸ್.ವಿ. ರಾಮಚಂದ್ರಪ್ಪ, ಪ್ರೊ.ಲಿಂಗಣ್ಣ, ಮಾಜಿ ಶಾಸಕ ಬಿ.ಪಿ. ಹರೀಶ್, ದೂಡ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, 22 ಕೆರೆಗಳ ಹೋರಾಟ ಸಮಿತಿಯ ಅಧ್ಯಕ್ಷ ಡಾ. ಮಂಜುನಾಥ್ ಗೌಡ, ತಹಶೀಲ್ದಾರ ಕೆ. ಬಿ. ರಾಮಚಂದ್ರಪ್ಪ, ಸಿಪಿಐ ಎಸ್. ಶಿವಪ್ರಸಾದ್, ಪಿಎಸ್ಐ ಡಿ. ರವಿಕುಮಾರ್, ನೀರಾವರಿ ಮತ್ತು ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.