ಕೃಷಿಯಲ್ಲಿ ದುಡಿಯುವ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವುದೇ ಮಣ್ಣೆತ್ತಿನ ಅಮವಾಸ್ಯೆ ಹಬ್ಬ

ನ್ಯಾಮತಿಯಲ್ಲಿ ಗ್ರಾಮೀಣ ಸೊಗಡಿನ ಹಬ್ಬ ಸಂಭ್ರಮದಿಂದ ಆಚರಣೆ

ನ್ಯಾಮತಿ, ಜೂ.21- ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದ ಗ್ರಾಮೀಣ ಸೊಗಡಿನ ಸಂಸ್ಕೃತಿಯಾಗಿ ಇಂದಿಗೂ ಆಚರಣೆಯಲ್ಲಿರುವ ಮಣ್ಣೆತ್ತಿನ ಅಮವಾಸ್ಯೆಯನ್ನು  ಭಾನುವಾರ ಕೊರೊನಾ  ವೈರಸ್‍ನಿಂದಾಗಿ  ಸರಳವಾಗಿ  ಆಚರಣೆ  ಮಾಡಲಾಯಿತು

ಮಣ್ಣೆತ್ತಿನ ಅಮವಾಸ್ಯೆ ಹಬ್ಬದಂದು ಮನೆ-ಮನೆಯಲ್ಲಿ ಮಣ್ಣಿನ ಎತ್ತುಗಳನ್ನು ಇಟ್ಟು ಪೂಜಿಸುವ ಹಬ್ಬವನ್ನು ಜೇಷ್ಠ ಬಹುಳದ ಮಣ್ಣೆತ್ತಿನ ಅಮವಾಸ್ಯೆ ಹಬ್ಬ ಅನಾದಿ ಕಾಲದಿಂದಲೂ ಆಚರಣೆಯಲ್ಲಿದ್ದು, ರೈತಾಪಿ ವರ್ಗವು  ದನ-ಕರುಗಳಿಗೆ ವಿಶೇಷವಾಗಿ, ಎತ್ತುಗಳಿಗೆ ಬೆಳ್ಳಂಬೆಳಗ್ಗೆ ಮೈ ತೊಳೆದು ಭಸ್ಮ, ಗಂಧ, ಕುಂಕುಮ, ಅರಿಶಿಣ, ಅಕ್ಷತೆ, ಹೂಗಳಿಂದ ಪೂಜಿಸಿದರು.

ಕೃಷಿಕರಾದವರು ಮನೆಯಲ್ಲಿ ಎತ್ತು ದನ-ಕರುಗಳು ಇಲ್ಲದವರು ಕುಂಬಾರರ ಮನೆಗೆ ತೆರಳಿ ಸಿದ್ದಗೊಂಡ ಮಣ್ಣಿನ ಎತ್ತುಗಳನ್ನು ತಂದು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ದೇವರ ಮನೆಯಲ್ಲಿಟ್ಟು ವಿಶೇಷ ಪೂಜೆ ಸಲ್ಲಿಸಿ ಮೂರು ದಿನಗಳ ನಂತರ ಪುನಃ ಪೂಜೆ ಸಲ್ಲಿಸಿ ಹರಿಯುವ ನದಿ, ಹಳ್ಳ-ಕೊಳ್ಳಗಳಲ್ಲಿ ಮೃತಿಕ ಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ.

ಹೊಲ-ಗದ್ದೆಗಳಲ್ಲಿ ಎತ್ತುಗಳು ಓಡಾಡಿದರೆ ಅವುಗಳ ಪಾದ ಸ್ಪರ್ಶದಿಂದ ಫಸಲು ವೃದ್ಧಿಸುತ್ತದೆಂಬ ನಂಬಿಕೆ ಇತ್ತು. ಪ್ರಸ್ತುತ ದಿನಗಳಲ್ಲಿ ಆಧುನಿಕ ಬೇಸಾಯ ಪದ್ಧತಿಯ ನೆಪದಲ್ಲಿ ಎತ್ತುಗಳ ಜಾಗವನ್ನು ಟ್ರ್ಯಾಕ್ಟರ್, ಟಿಲ್ಲರ್‍ಗಳಂತಹ ಯಂತ್ರಗಳ ಬಳಕೆಯ ಭರಾಟೆ ಹೆಚ್ಚಾಗಿದ್ದು, ಎತ್ತುಗಳ ಬಳಕೆ ವಿರಳವಾಗಿದೆ. ಆದರೆ, ಆಧುನಿಕ ಯುಗದಲ್ಲೂ ಸನಾತನ ಸಂಸ್ಕೃತಿಯ ಪ್ರತೀಕವಾಗಿ ಮಣ್ಣೆತ್ತನ್ನು ಕೊಂಡು ತಂದು ಪೂಜಿಸುವವರು ಇದ್ದಾರೆಂದರೆಂಬುದಕ್ಕೆ  ಗ್ರಾಮೀಣ-ಪಟ್ಟಣ ಪ್ರದೇಶಗಳ ಭಾಗವೇ ಸಾಕ್ಷಿಯಾಗಿದೆ.

ಸೂರ್ಯಗ್ರಹಣ ಸಂಭವಿಸಿದ ಹಿನ್ನೆಲೆಯಲ್ಲಿ ಮಧ್ಯಾಹ್ನ  1.32ಕ್ಕೆ ಗ್ರಹಣ ಮೋಕ್ಷವಾದ ನಂತರ ನ್ಯಾಮತಿ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ  ದೇಗುಲ, ಮನೆಗಳನ್ನು ಶುಚಿಗೊಳಿಸಿದ ಬಳಿಕ ವಿಶೇಷ ಪೂಜೆ – ಪುನಸ್ಕಾರಗಳನ್ನು ನಡೆಲಾಯಿತು.

error: Content is protected !!