ಡಾ. ರಾಘವೇಂದ್ರ ಗುರೂಜಿ ಮತ್ತು ಶ್ರೀಮತಿ ಸಂಧ್ಯಾ ಮಂಗಳೂರು ದಂಪತಿ ಯೋಗಾಭ್ಯಾಸ ಮಾಡಿದರು.
ದಾವಣಗೆರೆ, ಜೂ. 21- ಯೋಗ ವೆಂಬುದು ಕೇವಲ ಶಾರೀರಿಕ – ಆಂಗಿಕ ಭಂಗಿಯಲ್ಲ, ಯೋಗ ಅದೊಂದು ನಮ್ಮ ಜೀವನದ ಆತ್ಮ ವಿಕಾಸಕ್ಕಿರುವ ರಾಜಮಾರ್ಗ ಎಂದು ನಗರದ ಆದರ್ಶ ಯೋಗ ಪ್ರತಿಷ್ಠಾನ, ಶ್ರೀ ಮಹಾ ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದ ಯೋಗ ಗುರು ಡಾ. ಯೋಗಾಚಾರ್ಯ ರಾಘವೇಂದ್ರ ಗುರೂಜಿ ಅಭಿಪ್ರಾಯಪಟ್ಟರು.
ವಿಶ್ವಯೋಗ ದಿನಾಚರಣೆಯ ನಿಮಿತ್ತ `ಮನೆ ಮನೆಗೆ ಯೋಗ-ಕುಟುಂಬ ಸದಸ್ಯರೊಂದಿಗೆ ಯೋಗ’ ಅಭಿಯಾನದೊಂದಿಗೆ ನಗರದ ವಿಶ್ವ ಯೋಗ ಮಂದಿರದಲ್ಲಿ ಇಂದು ಏರ್ಪಾಡಾಗಿದ್ದ ಸರಳ ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
2020 ಮನುಕುಲಕ್ಕೆ ಆಪತ್ತು ಬಂದಿರುವುದರ ಜೊತೆಗೆ ಕಂಕಣ ಸೂರ್ಯಗ್ರಹಣ ಹೀಗೆ ಮುಂದಿನ ದಿನಗಳಲ್ಲಿಯೂ ಸಹ ಇನ್ನಷ್ಟು ಸಂಕಟಗಳು ಬರುವ ಸಾಧ್ಯತೆಗಳಿವೆ. ಏನೇ ಕಷ್ಟ, ನಷ್ಟಗಳು ಸಂಭವಿಸಿದರೂ ಪ್ರಕೃತಿ ಮನುಕುಲಕ್ಕೆ ಒಳಿತನ್ನೇ ಮಾಡುತ್ತದೆ. ಆದ್ದರಿಂದ ನಾವುಗಳು ಪ್ರಕೃತಿಯನ್ನು ಆರಾಧಿಸಬೇಕು.
ಭಾರತೀಯ ಷಡ್ದರ್ಶನಗಳಲ್ಲಿ ಒಂದಾದ ಯೋಗ ಮಾರ್ಗವು ನಮ್ಮೆಲ್ಲಾ ಕಷ್ಟನಷ್ಟಗಳಿಗೆ ಸ್ವಲ್ಪವೂ ಕುಗ್ಗದೇ ಜಗ್ಗದೇ ಸಮಚಿತ್ತದಿಂದ ವರ್ತಿಸುವ ಸಾಧನವಾಗಿದೆ.
ಇಂದು ಶಾರೀರಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯ ಹಾಳಾಗಿದೆ. ಇದು ಮನೋದೈಹಿಕ ಕಾಯಿಲೆ ಎಂದು ಪರಿಗಣಿಸಲ್ಪಟ್ಟಿದೆ.
ಇದಕ್ಕೆ ಪರಿಹಾರ ಯೋಗಾಭ್ಯಾಸದಿಂದ ಮಾತ್ರ ಸಾಧ್ಯ ಎಂದು ಮನೋವೈದ್ಯರು ಸಾಬೀತು ಪಡಿಸಿದ್ದಾರೆ. ಆದ್ದರಿಂದ ಈ ವಿಶ್ವಯೋಗ ದಿನಾಚರಣೆಯೊಂದಿಗೆ ಯೋಗದ ಬೆಳಕನ್ನು ಹೆಚ್ಚು ಹೆಚ್ಚು ಚೆಲ್ಲುತ್ತಾ ಪ್ರತಿಯೊಂದು ಮನೆಯಲ್ಲಿಯೂ ಯೋಗದ ಜ್ಯೋತಿ ಬೆಳಗುವಂತಾಗಲಿ. ತನ್ಮೂಲಕ ವಿಶ್ವ ಆರೋಗ್ಯ ಹೊಂದಲಿ ಎನ್ನುವ ಆಶಯ ನಮ್ಮದು ಎಂದು ತಿಳಿಸಿದರು.