ಶಿವಶಂಕರ್ ಹತ್ಯೆ ಸಂಚಿನ ಹಿಂದೆ ರಾಜಕೀಯ ಪಿತೂರಿ : ಜೆಡಿಎಸ್

ದಾವಣಗೆರೆ, ಜೂ.17- ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವರ ಹತ್ಯೆಗೆ ಸಂಚು ರೂಪಿಸಿದ ಪ್ರಮುಖ ಆರೋಪಿ ಮಂಜುನಾಥ ನನ್ನು ಶೀಘ್ರವೇ ಬಂಧಿಸಿ ಕಾನೂನು ಶಿಕ್ಷೆ ವಿಧಿಸಬೇಕು ಹಾಗೂ ಈ ಸಂಚಿನ ಬಗ್ಗೆ ಸೂಕ್ತ ತನಿಖೆ ನಡೆಸಿ ಕುಮ್ಮಕ್ಕು ನೀಡಿದವರನ್ನೂ ಸಹ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಜೆಡಿಎಸ್ ಆಗ್ರಹಿಸಿದೆ.

ಹರಿಹರ ವಿಧಾನಸಭಾ ಕ್ಷೇತ್ರದ ಯುವ ರಾಜಕಾರಣಿ, ಅಜಾತ ಶತ್ರು ಎಂದೇ ಹೆಸರಾಗಿರುವ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಹತ್ಯೆಗೆ ಸಂಚು ರೂಪಿಸಿದ್ದು ಆತಂಕಕಾರಿ. ಹರಿಹರ ಕ್ಷೇತ್ರದಲ್ಲಿ ಪ್ರತಿಫಲಾಪೇಕ್ಷೆ ಇಲ್ಲದೇ ನಿಷ್ಠೆಯಿಂದ ತಮ್ಮ ಕೆಲಸದಲ್ಲಿ ತೊಡಗಿದ್ದಾರೆ. ಅವರ ಕಾರ್ಯವೈಖರಿ ಸಹಿಸದೇ ಹತ್ಯೆ ನಡೆಸಲು ಮುಂದಾಗಿರುವುದನ್ನು ಪಕ್ಷವು ತೀವ್ರವಾಗಿ ಖಂಡಿಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇಂತಹ ಕೃತ್ಯಕ್ಕೆ ಮುಂದಾಗಿದ್ದ ಇಬ್ಬರನ್ನು ಬಂಧಿಸಲಾಗಿದೆ. ಆದರೆ, ಪರಾರಿಯಾಗಿರುವ ಪ್ರಮುಖ ಆರೋಪಿಯನ್ನು ಬಂಧಿಸಿ ಸಂಚಿನ ಹಿಂದಿರುವ ಕಾಣದ ಕೈವಾಡ ಬಯಲಿಗೆಳೆಯಬೇಕೆಂದು ಒತ್ತಾಯಿಸಿದರು.

ಮುಖಂಡ ಜೆ.ಅಮಾನುಲ್ಲಾ ಖಾನ್ ಮಾತನಾಡಿ, ಹರಿಹರದಲ್ಲಿ ಗ್ರೀನ್‍ಸಿಟಿ ಲೇಔಟ್ ಕಳಪೆ ಕಾಮಗಾರಿ ವಿರುದ್ಧ ಸಾರ್ವಜನಿಕರ ಪರವಾಗಿ ನಗರಸಭೆಯಿಂದ ತಡೆಯಾಜ್ಞೆ ತಂದಿದ್ದರಿಂದ ಶಿವಶಂಕರ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ. ಗುತ್ತಿಗೆದಾರ ಮಂಜುನಾಥ್ ಯಾವುದೇ ಇಲಾಖೆಯಿಂದ ಕಾನೂನು ರೀತಿ ಅನುಮೋದನೆ ಪಡೆಯದೇ ಕಾಮಗಾರಿ ನಡೆಸಿದ್ದನ್ನು ಪ್ರಶ್ನಿಸಿದ್ದರು. ಅಲ್ಲದೇ ಜನರಿಗೆ ಕಲ್ಪನೆಯ ಮನೆ ಕಟ್ಟಿಕೊಡುವುದಾಗಿ ಆಸೆ ತೋರಿಸಿ ನಂಬಿಸಿ ಅಡ್ಡ ದಾರಿಯಿಂದ ಹಣ ಸಂಪಾದನೆಗೆ ಮುಂದಾಗಿದ್ದ. ಇದನ್ನು ತಪ್ಪಿಸಲು ಮುಂದಾಗಿದ್ದಕ್ಕೆ ಹತಾಶನಾದ ಮಂಜುನಾಥ್ ಶಿವಶಂಕರ್ ಅವರ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಖಂಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಟಿ. ಗಣೇಶ್ ದಾಸಕರಿಯಪ್ಪ, ಅಂಜಿನಪ್ಪ ಕಡತಿ, ಟಿ. ಅಸ್ಗರ್, ಶೀಲಾ ಕುಮಾರ್, ವಸಂತಮ್ಮ, ಮನ್ಸೂರ್ ಅಲಿ, ವೀರೇಂದ್ರಚಾರಿ ಸೇರಿದಂತೆ ಇತರರು ಇದ್ದರು. 

ಎಸ್ಪಿಗೆ ಮನವಿ: ಮಾಜಿ ಶಾಸಕ ಶಿವಶಂಕರ್ ಅವರ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದ ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ ನೇತೃತ್ವದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

error: Content is protected !!