ಇಷ್ಟದ ತಿನಿಸು ಸವಿಯಲು ಆರಂಭವಾಗುತ್ತಿವೆ ಹೋಟೆಲ್‌ಗಳು

ಸೇವೆ ನೀಡಲು ಹೋಟೆಲ್‌ಗಳು ಸಿದ್ಧ

ದಾವಣಗೆರೆ, ಜೂ. 7-  ಜೂನ್ 8 ರಿಂದ ಹೋಟೆಲ್ ಗಳ ಆರಂಭಕ್ಕೆ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ನಗರದ ಹೋಟೆಲ್‌ಗಳು ಗ್ರಾಹಕರ  ಹಸಿವು ನೀಗಿಸಲು ಸನ್ನದ್ಧವಾಗಿವೆ.

ಭಾನುವಾರ ಬಹುತೇಕ ಹೋಟೆಲ್‌ಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿತ್ತು. ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒಂದು ಟೇಬಲ್‌ಗೆ ಒಬ್ಬರು ಅಥವಾ ಇಬ್ಬರನ್ನು ಮಾತ್ರ ಕೂರಿಸಲು ಕ್ರಮ ವಹಿಸಲಾಗುತ್ತಿತ್ತು. ಉಳಿದಂತೆ ಹೋಟೆಲ್‌ಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಮಾಸ್ಕ್, ಗ್ಲೌಸ್ ಒದಗಿಸಿ, ಸ್ವಚ್ಚತೆ ಕಾಯ್ದುಕೊಳ್ಳಲು ಮಾಲೀಕರು ಈಗಾಗಲೇ ಸೂಚಿಸಿದ್ದಾರೆ.

ಈಗಾಗಲೇ ನಗರದ ಕೆಲವು ಹೋಟೆಲ್‌ಗಳು ಆಹಾರವನ್ನು ಪಾರ್ಸೆಲ್ ಮೂಲಕ ಮಾತ್ರ ನೀಡುತ್ತಿದ್ದವು. ಇದರಿಂದ ಗ್ರಾಹಕರಿಗೆ ಅನಾನುಕೂಲವೂ ಆಗುತ್ತಿತ್ತು. ಆದರೆ ಈಗ ಹೋಟೆಲ್‌ನಲ್ಲಿಯೇ ಕುಳಿತು ತನಗಿಷ್ಟದ ಪದಾರ್ಥ ಸೇವಿಸಲು ಅವಕಾಶ ಇರುವುದರಿಂದ ಗ್ರಾಹಕರೂ ಸಹ ಖುಷಿಯಾಗಿದ್ದಾರೆ.

ನಗರದ ಶರಭೇಶ್ವರ ಹೋಟೆಲ್‌ನಲ್ಲಿ ಒಂದು ಟೇಬಲ್‌ಗೆ ಇಬ್ಬರು ಮಾತ್ರ ಕೂರಲು ವ್ಯವಸ್ಥೆ ಮಾಡಲಾಗಿದ್ದು, ಇಬ್ಬರ ನಡುವೆಯೂ ಗ್ಲಾಸ್ ಪಾರ್ಟಿಷಿಯನ್ ಮಾಡಲಾಗಿದೆ. 

ಹೋಟೆಲ್‌ಗಳಿಗೆ ಬರಲು ಭಯ ಬೇಡ: ಅಣಬೇರು ರಾಜಣ್ಣ

ಹೋಟೆಲ್‌ಗಳಿಗೆ ಬರಲು ಗ್ರಾಹಕರು ಯಾವುದೇ ಭಯ ಅಥವಾ ಚಿಂತೆ ಮಾಡಬೇಕಿಲ್ಲ ಎಂದು ಹೋಟೆಲ್ ಉದ್ದಿಮೆದಾರರ ಸಂಘದ ಗೌರವ ಅಧ್ಯಕ್ಷರೂ ಆಗಿರುವ, ಅಪೂರ್ವ ಗ್ರೂಪ್ ಆಫ್ ಹೋಟೆಲ್ಸ್ ವ್ಯವಸ್ಥಾಪಕ ನಿರ್ದೇಶಕ ಅಣಬೇರು ರಾಜಣ್ಣ ಹೇಳಿದ್ದಾರೆ.

ಜನತಾವಾಣಿ ಯೊಂದಿಗೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಹೋಟೆಲ್‌ಗಳನ್ನು ಬಂದ್ ಮಾಡಲಾಗಿತ್ತು. ಆದರೆ ಇದೀಗ ಎಲ್ಲಾ ರೀತಿಯ ಸರ್ಕಾರದ ಮಾರ್ಗಸೂಚನೆ ಪಾಲಿಸಿ, ಸ್ವಚ್ಛತೆ ಕಾಪಾಡಿ ಕೊಂಡು ಹೋಟೆಲ್‌ಗಳು ಪುನರಾರಂಭಗೊಳ್ಳಲಿವೆ. ಭಯವಿಲ್ಲದೆ ಗ್ರಾಹಕರು ಹೋಟೆಲ್‌ಗಳಿಗೆ ಬರಬಹುದು ಎಂದು ಹೇಳಿದರು.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಮ್ಮ ಅಪೂರ್ವ ಗ್ರೂಪ್ ಆಫ್ ಹೋಟೆಲ್ ಸೇವೆಯನ್ನೂ ಸ್ಥಗಿತಗೊಳಿಸಲಾಗಿತ್ತು. ಸೋಮವಾರದಿಂದ ಅವುಗಳೂ ಸೇವೆಗೆ ಸಜ್ಜಾಗಿವೆ. ಒಂದು ಟೇಬಲ್‌ಗೆ ಇಬ್ಬರು ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದವರು

ಹೇಳಿದರು. ಗ್ರಾಹಕರ ಹೆಸರು, ಮೊಬೈಲ್ ಸಂಖ್ಯೆ ಪಡೆದು ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಮಾಡಲಾಗುವುದು. ಹೋಟೆಲ್‌ ಸುತ್ತ ಹಾಗೂ ಒಳಭಾಗದಲ್ಲಿ ಸ್ಯಾನಿಟೈಸರ್ ಮಾಡಲಾಗಿದೆ. ಅಡುಗೆ ಮನೆಯಲ್ಲಿಯೂ ಸಿಬ್ಬಂದಿಗಳು ಮಾಸ್ಕ್, ಗ್ಲೌಸ್ ಧರಿಸಿ ಸ್ವಚ್ಛತೆ ಕಾಪಾಡಿಕೊಳ್ಳಲು ಸೂಚಿಸಲಾಗಿದೆ. ಗ್ರಾಹಕರಿಗೆ ನಮ್ಮ ಹೋಟೆಲ್‌ನಿಂದ ಯಾವುದೇ ರೀತಿಯ ತೊಂದರೆ ಇಲ್ಲ  ಎಂದು ರಾಜಣ್ಣ ಹೇಳಿದರು.

error: Content is protected !!