ದಾವಣಗೆರೆ, ಜೂ.5- ಡಿಕೆಶಿ ಪದಗ್ರಹಣಕ್ಕೆ ಸರ್ಕಾರ ಅಡ್ಡಿಯಾಗಿಲ್ಲ. ಡಿಕೆಶಿ ಸಿಎಂ ಆಗುತ್ತೇನೆ ಎಂದು ಎದೆ ಉಬ್ಬಿಸಿ ಭ್ರಮಾಲೋಕದಲ್ಲಿ ತೇಲುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ವ್ಯಂಗ್ಯವಾಡಿದರು.
ನಗರದಲ್ಲಿ ಇಂದು ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ತುಘಲಕ್ ದರ್ಬಾರ್ ಮಾಡಿದ್ದರು. ನಾವು ಆ ರೀತಿ ಮಾಡಿಲ್ಲ. ಪದಗ್ರಹಣಕ್ಕೆ ಅಡ್ಡಿಯಾಗಿಲ್ಲ. ಕೋವಿಡ್ ವೈರಸ್ ನಿಯಂತ್ರಣದ ಹಿನ್ನೆಲೆ ಯಲ್ಲಿ ಲಾಕ್ ಡೌನ್ ಇದೆ. ಈ ಪರಿಸ್ಥಿತಿಯಲ್ಲಿ ನಿಯಮಾನುಸಾರ ಮಾಡಿಕೊಳ್ಳಲಿ ಯಾರು ಬೇಡ ಎನ್ನುತ್ತಾರೆ. ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡುತ್ತಾ, ಪೈಲ್ವಾನ್ ರೀತಿ ಎದೆಯುಬ್ಬಿಸಿ ಡಿಕೆಶಿ ಮುಂದೆ ಬರುತ್ತಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕುವುದನ್ನು ಬಿಡಲಿ ಎಂದು ಟಾಂಗ್ ನೀಡಿದರು.
ಬಿಜೆಪಿಯಲ್ಲಿ ಭಿನ್ನಮತವಿಲ್ಲ: ಬಿಜೆಪಿ ಯಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಿಜೆಪಿಯಲ್ಲಿ ಯಾವುದೇ ಭಿನ್ನ ಮತವಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಡಿಕೆಶಿ, ಸಿದ್ದರಾಮಯ್ಯ ಭ್ರಮ ನಿರಸನರಾಗಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಅವಧಿಯಲ್ಲಿ ತುಘಲಕ್ ದರ್ಬಾರ್ ನಡೆಸಿದ್ದಾರೆಂದು ಟೀಕಿಸಿದರು.
ಬಿಜೆಪಿ ರಿವರ್ಸ್ ಆಪರೇಷನ್ ಮಾಡಿಸಲಿ: ಡಿಕೆಶಿಗೆ ಸವಾಲು
ಬಿಜೆಪಿಯಿಂದ ರಿವರ್ಸ್ ಆಪರೇಷನ್ ಮಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ಗೆ ಅಂತಹದ್ದೊಂದು ಆಸೆ ಇದ್ದರೆ ರಿವರ್ಸ್ ಆಪರೇಷನ್ ಮಾಡಿಸಲಿ ನೋಡೋಣ. ಬಿಜೆಪಿ ರಿವರ್ಸ್ ಆಪರೇಷನ್ ಮಾಡಿದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ.
ಯಾವುದೇ ಕಾರಣಕ್ಕೂ ಅಪರೇಷನ್ ಆಗೋಲ್ಲ. ಇದನ್ನು ಡಿಕೆಶಿ ಸವಾಲಾಗಿ ಸ್ವೀಕರಿಸಲಿ ನೋಡೋಣ. ನಮಗೂ ತೋಳ್ಬಲವಿದೆ, ಕಾರ್ಯಕರ್ತರ ಪಡೆ ಇದೆ. ಇದನ್ನು ಕಾಂಗ್ರೆಸ್ ಸೃಷ್ಟಿ ಮಾಡುತ್ತಿದೆ ಎಂದು ಡಿಕೆಶಿಗೆ ರೇಣುಕಾಚಾರ್ಯ ಬಹಿರಂಗ ಸವಾಲು ಎಸೆದರು.
ಆಡಳಿತ ಯಂತ್ರದಲ್ಲಿ ವಿಜಯೇಂದ್ರ ಹಸ್ತಕ್ಷೇಪ ಇಲ್ಲ: ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ಪುತ್ರ ಸರ್ಕಾರಿ ಕಾಮಗಾರಿ ಶಂಕು ಸ್ಥಾಪನೆ ಮಾಡಿದ್ದರು. ಆ ರೀತಿ ಬಿಎಸ್ ವೈ ಪುತ್ರ ವಿಜಯೇಂದ್ರ ಯಾವುದೇ ಸರ್ಕಾರಿ ಕಾರ್ಯಕ್ರಮಕ್ಕೆ ಭಾಗವಹಿಸಿಲ್ಲ. ಸರ್ಕಾರದಲ್ಲಿ ವಿಜಯೇಂದ್ರ ಹಸ್ತಕ್ಷೇಪ ಮಾಡಿಲ್ಲ. ಬಿಜೆಪಿಯಲ್ಲಿ ಬಿಎಸ್ ವೈ ಪ್ರಶ್ನಾತೀತ ನಾಯಕ ಎಂದರು.
ಪಕ್ಷದಲ್ಲಿ ಗೊಂದಲ ಇಲ್ಲ: ಬಿಎಸ್ ವೈ ಬಗ್ಗೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿ ಯಿಸಿದ ರೇಣುಕಾಚಾರ್ಯ, ಕೊರಾನಾ ವೈರಸ್ ಅನ್ನು ನಿಯಂತ್ರಿಸುವಲ್ಲಿ ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದ್ದು, ಈ ಬಗ್ಗೆ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಬಿಎಸ್ ವೈಗೆ ಶಹಬ್ಬಾಸ್ ಗಿರಿ ನೀಡಿದ್ದಾರೆ. ಯತ್ನಾಳ್ ಅವರನ್ನು ಬಿಜೆಪಿಗೆ ವಾಪಾಸ್ ಕರೆ ತಂದಿದ್ದೇ ಬಿಎಸ್‌ವೈ. ಹೀಗಿದ್ದರೂ ಯತ್ನಾಳ್ ಬಿಎಸ್ ವೈ ಬಗ್ಗೆ ಮಾತನಾಡಬಾರದಾಗಿತ್ತು. ಅವರ ಬಗ್ಗೆ ನಮಗೂ ಗೌರವ ಇದೆ. ಪಕ್ಷದ ನಾಲ್ಕು ಗೋಡೆಯ ಮಧ್ಯ ಚರ್ಚೆ ಮಾಡಿ ಬಗೆಹರಿಸುತ್ತೇವೆ ಎಂದರು.
ಸಚಿವ ಸ್ಥಾನಕ್ಕೆ ಲಾಬಿ ನಡೆಸಿಲ್ಲ: ಸಚಿವ ಸ್ಥಾನಕ್ಕೆ ಲಾಬಿ ನಡೆಸಿಲ್ಲ, ನಡೆಸುವುದೂ ಇಲ್ಲ. ಹಾದಿ ಬೀದಿಯಲ್ಲಿ ರಂಪ ಮಾಡಿ ಸಚಿವ ಸ್ಥಾನ ಪಡೆಯಲ್ಲ. ಈ ಬಗ್ಗೆ ಎಲ್ಲಿ ಮಾತನಾಡ ಬೇಕೋ ಅಲ್ಲಿ ಮಾತಾಡ್ತೀನಿ. ಕೊರೊನಾ ಸಂದರ್ಭದಲ್ಲಿ ರಾಜಕೀಯ ಬೇಡ. ಜಿಲ್ಲೆಯ ಬಿಜೆಪಿ ಶಾಸಕರು ಒಟ್ಟಾಗಿದ್ದೇವೆ. ಭೈರತಿ ಬಸವರಾಜ್ ಉಸ್ತುವಾರಿಯಾಗಿದ್ದಕ್ಕೆ ನಮ್ಮ ಅಭ್ಯಂತರವಿಲ್ಲ. ಅವರು ಪಕ್ಷದ ಸಿದ್ದಾಂತ ಒಪ್ಪಿ ಬಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.