ಒಡವೆಗಳ ಮೇಲೆ ಹೆಚ್ಯುಐಡಿ ಕಡ್ಡಾಯಕ್ಕೆ ವಿರೋಧ
ದಾವಣಗೆರೆ, ಆ.23- ಕೇಂದ್ರ ಸರ್ಕಾರವು ಒಡವೆಗಳ ಮೇಲೆ ಹೆಚ್ಯುಐಡಿ ಕಡ್ಡಾಯಗೊಳಿಸಿ ರುವುದನ್ನು ವಿರೋಧಿಸಿ ನಗರದಲ್ಲಿಂದು ದಿ ದಾವಣಗೆರೆ ಜ್ಯುಯಲರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಚಿನ್ನ-ಬೆಳ್ಳಿ ಅಂಗಡಿಗಳನ್ನು ಬಂದ್ ಮಾಡಿ ಸರ್ಕಾರದ ಗಮನ ಸೆಳೆಯಲಾಯಿತು. ನಂತರ ಪ್ರತಿಭಟನೆ ನಡೆಸಲಾಯಿತು. ಈ ಬಂದ್ ಗೆ ಜಿಲ್ಲೆಯ ಚಿನ್ನ-ಬೆಳ್ಳಿ ವರ್ತಕರು ಬೆಂಬಲ ಸೂಚಿಸಿದ್ದರು.
ಕೇಂದ್ರ ಸರ್ಕಾರ ಚಿನ್ನಾಭರಣಗಳ ಮೇಲೆ ಹಾಲ್ ಮಾರ್ಕ್ ಮತ್ತು ಹೆಚ್ಯುಐಡಿಯನ್ನು ಕಡ್ಡಾಯಗೊಳಿ ಸಿದೆ. ಇದರಲ್ಲಿ ಹಾಲ್ಮಾರ್ಕ್ ಹಾಕಲು ನಮ್ಮ ಅಭ್ಯಂತರವಿಲ್ಲ. ಆದರೆ, ಹಾಲ್ಮಾರ್ಕ್ ಯೂನಿಟ್ ಐಡೆಂಟಿಫಿಕೇಷನ್ ಡಿಸ್ಕ್ರಿಪ್ಷನ್ನನ್ನು ಕಡ್ಡಾಯಗೊಳಿಸಿ ರುವುದರಿಂದ ಪ್ರತಿಯೊಬ್ಬ ಚಿನ್ನ-ಬೆಳ್ಳಿ ವರ್ತಕರಿಗೆ ತೊಂದರೆಯಾಗಲಿದೆ ಎಂದು ಅಸೋಸಿಯೇಷನ್ನ ಅಧ್ಯಕ್ಷ ಅರುಣಚಲ ಎನ್. ರೇವಣಕರ್ ಆಕ್ಷೇಪಿಸಿದರು.
ಕೇಂದ್ರ ಸರ್ಕಾರ ಜೂ.30ಕ್ಕೆ ಅನ್ವಯ ಆಗುವಂತೆ ಹಾಲ್ಮಾರ್ಕ್ ಮಾಡಿರುವ ಚಿನ್ನ ಎಷ್ಟಿದೆ ಎಂದು ಘೋಷಿಸಿಕೊಳ್ಳುವಂತೆ ಕರೆ ನೀಡಿದೆ. ಚಿನ್ನ-ಬೆಳ್ಳಿ ವ್ಯಾಪಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಈ ನಿರ್ಧಾರ ಸಹಕಾರಿಯಾಗಲಿದೆ. ಹೆಚ್ಯುಐಡಿಯನ್ನು ಕಡ್ಡಾಯಗೊಳಿಸಿರುವುದರಿಂದ ಕೆಲ ತಾಂತ್ರಿಕ ತೊಂದರೆಗಳಾಗಲಿವೆ. ಆದ್ದರಿಂದ ತಕ್ಷಣವೇ ಹೆಚ್ಯುಐಡಿ ಕಡ್ಡಾಯಗೊಳಿಸುವ ನಿರ್ಧಾರವನ್ನು ವಾಪಾಸ್ ಪಡೆಯಬೇಕೆಂದು ಉಪಾಧ್ಯಕ್ಷ ರಾಜನಹಳ್ಳಿ ಡಿ. ಬದ್ರಿನಾಥ್ ಆಗ್ರಹಿಸಿದರು.
ಮಂಡಿಪೇಟೆಯಲ್ಲಿ ಪ್ರತಿಭಟನೆ ನಡೆಸಿದ ಅಸೋಷಿಯೇಷನ್ ನ ಗೌರವಾಧ್ಯಕ್ಷ ಶಂಕರ್ ಎನ್. ವಿಠ್ಠಲ್ಕರ್, ಕಾರ್ಯದರ್ಶಿ ನಲ್ಲೂರ್ ಎಸ್. ರಾಜಕುಮಾರ್, ನಿರ್ದೇಶಕ ಮಂಜುನಾಥ ಆರ್. ವೆರ್ಣೇಕರ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು, ಚಿನ್ನ-ಬೆಳ್ಳಿ ವರ್ತಕರು ನಂತರ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಮುಖೇನ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಚ್ಯುಐಡಿ ಕಡ್ಡಾಯಗೊಳಿಸುವ ನಿರ್ಧಾರವನ್ನು ವಾಪಾಸ್ ಪಡೆಯಬೇಕೆಂದು ಮನವಿ ಸಲ್ಲಿಸಿದರು.
ಅಂಗಡಿ ಬಂದ್ ಗ್ರಾಹಕರು ವಾಪಸ್: ಚಿನ್ನ-ಬೆಳ್ಳಿ ಅಂಗಡಿಗಳ ಬಂದ್ ಬಗ್ಗೆ ಮಾಹಿತಿ ಇಲ್ಲದೇ ಚಿನ್ನಾಭರಣ ಖರೀದಿಗೆ ಬಂದಿದ್ದ ಕೆಲ ಗ್ರಾಹಕರು ಅಂಗಡಿಗಳಿಗೆ ಬೀಗ ಹಾಕಿರುವುದನ್ನು ಕಂಡು ಕಾರಣ ತಿಳಿದು ವಾಪಸ್ ನಡೆದ ಪ್ರಸಂಗವೂ ನಗರದ ವಿವಿಧ ಚಿನ್ನ-ಬೆಳ್ಳಿ ಅಂಗಡಿಗಳ ಬಳಿ ಜರುಗಿದೆ.