ಜಗಳೂರಿನ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಜಿ.ತಿಮ್ಮಯ್ಯ ಕಿವಿಮಾತು
ಜಗಳೂರು, ಫೆ.23- ವೈಜ್ಞಾನಿಕ ಯುಗ ದಲ್ಲಿಯೂ ದೇವದಾಸಿ ಪದ್ಧತಿ ಆಚರಣೆಯಲ್ಲಿ ರುವುದು ಬೇಸರದ ಸಂಗತಿಯಾಗಿದೆ. ಕಾನೂನು ಗಳಿದ್ದರೂ ಸಾಮಾಜಿಕ ವ್ಯವಸ್ಥೆಯ ಕುತಂತ್ರಕ್ಕೆ ಮುಗ್ಧ ಹೆಣ್ಣುಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಜಿ.ತಿಮ್ಮಯ್ಯ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ದೇವದಾಸಿ ಪುನರ್ವಸತಿ ಯೋಜನೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಇವರುಗಳ ಸಂಯುಕ್ತಾಶ್ರಯದಲ್ಲಿ ದೇವದಾಸಿಯರಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ, ನಂತರ ಅವರು ಮಾತನಾಡಿದರು.
ದೇವರ ಹೆಸರಲ್ಲಿ ಮೂಢನಂಬಿಕೆಗೆ ಬಲಿಯಾಗುವ ದೇವದಾಸಿ ಅನಿಷ್ಠ ಪದ್ಧತಿ ಅಂತ್ಯಗೊಳಿಸಲು ಕಟಿಬದ್ಧರಾಗಬೇಕು. ಜಾಗೃತರಾಗಿ ಸ್ವಯಂ ಪ್ರೇರಿತರಾಗಿ ಪ್ರತಿರೋಧ ವ್ಯಕ್ತಪಡಿಸಬೇಕು ಎಂದು ಸಲಹೆ ಹೇಳಿದರು.
2015 ಬಡತನ ನಿರ್ಮೂಲನಾ ಕಾಯ್ದೆಯಡಿ ದೊರೆಯುವ ಸೌಲಭ್ಯಗಳ ಬಗ್ಗೆ ಪ್ರತಿ ಗ್ರಾಮಗಳಲ್ಲಿಯೂ ಕಾನೂನು ಸೇವಾ ಸಮಿತಿಯ ವಕೀಲರ ತಂಡ ಸಮೀಕ್ಷೆ ನಡೆಸುತ್ತಿದ್ದು, ಪ್ರತಿಯೊಬ್ಬರಿಗೂ ಸೌಲಭ್ಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಧರ್ಮ ಮತ್ತು ಸತ್ಯದ ಹಾದಿಯಲ್ಲಿ ಕಾನೂನು ನಿಂತಿದೆ. ಆದರೆ, ಯಾವ ದೇವರು ಧರ್ಮಗಳು ಮೌಢ್ಯತೆಗಳ ಆಚರಣೆಗಳ ಬಗ್ಗೆ ಹೇಳುವುದಿಲ್ಲ ಎಂಬುದನ್ನು ಮನಗಾಣಬೇಕಿದೆ ಎಂದರು.
ದೇವದಾಸಿ ಮಹಿಳಾ ವಿಮೋಚನೆ ಸಂಘದ ಗೌರವಾಧ್ಯಕ್ಷ ಆರ್.ಓಬಳೇಶ್ ಮಾತನಾಡಿ, ಸಮಾಜದಲ್ಲಿ ಊಳಿಗ ಮಾನ್ಯ ಪದ್ಧತಿ ಭೂ ಮಾಲಿಕರ ಸ್ವಾರ್ಥಕ್ಕಾಗಿ ದೇವದಾಸಿ ಪದ್ದತಿಗೆ ಬಲಿಯಾಗುವುದನ್ನು ರಾಜ್ಯವ್ಯಾಪಿ ಮಾರುತಿ ಮಾನ್ಪಡೆ ಅವರ ಜಾಗೃತಿಯ ಸಂಘಟನೆಯ ಹೋರಾಟದ ಫಲವಾಗಿ ಇಂದು ದೇವದಾಸಿಯರ ಸಂಖ್ಯೆ ಕ್ರಮೇಣ ಕಡಿಮೆಯಾಗಿದೆ ಎಂದರು.
ಮಾಜಿ ದೇವದಾಸಿಯರಿಗೆ ನಿವೇಶನ, ಮಾಸಿಕವಾಗಿ 5000 ಕ್ಕೆ ವೇತನ ಏರಿಕೆ, ಮಕ್ಕಳ ವಿದ್ಯಾಭ್ಯಾಸ, ಭೂಮಿ, ವಸತಿ ಸೌಲಭ್ಯಗಳು ಸಿಗಬೇಕಿದೆ. ತಾಲ್ಲೂಕಿನಲ್ಲಿಯೂ 218 ದೇವದಾಸಿಯರಿದ್ದಾರೆ. ಅವರಿಗೆ ವಸತಿ, ನಿವೇಶನ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಡಾ.ನಾಗವೇಣಿ ಮಾತನಾಡಿ, ದೇವದಾಸಿ ಮಹಿಳೆಯರು ಸರ್ಕಾರಿ ಸೌಲಭ್ಯಗಳನ್ನು ಪಡೆದು ಪ್ರಜ್ಞಾವಂತರಾಗಿ ಆರ್ಥಿಕ ಅಭಿವೃದ್ಧಿಯ ಜೊತೆಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕಿನ ಬಸವನಕೋಟೆ ಗ್ರಾ.ಪಂ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಮಾಜಿ ದೇವದಾಸಿ ಮಹಿಳೆ ಮರಿಯಮ್ಮನವರಿಗೆ ಸನ್ಮಾನಿಸಿ, ಗೌರವಿಸಲಾಯಿತು ಹಾಗೂ ದೇವದಾಸಿ ವಿರೋಧಿಸುವ ಭಿತ್ತಿಚಿತ್ರ ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕಿ ಎಂ.ರೂಪ, ತಾ.ಪಂ. ಇಒ ಮಲ್ಲಾನಾಯ್ಕ, ವಕೀಲರ ಸಂಘದ ಅಧ್ಯಕ್ಷ ಬಸವರಾಜ್, ಕಾರ್ಯದರ್ಶಿ ತಿಪ್ಪೇಸ್ವಾಮಿ, ವಕೀಲರಾದ ರುದ್ರೇಶ್, ಕರಿಬಸಯ್ಯ, ಮರೇನ ಹಳ್ಳಿ ಬಸವರಾಜ್, ದೇವದಾಸಿ ಪುನರ್ವಸತಿ ಯೋಜನಾ ಅನುಷ್ಠಾನ ಅಧಿಕಾರಿಗಳಾದ ಪ್ರಜ್ಞಾ ಕುಸುಮಾ ಸೇರಿದಂತೆ ಮತ್ತಿತರರಿದ್ದರು.