ದಾವಣಗೆರೆ, ಫೆ. 6 – ಸಮೀಪದ ತೋಳಹುಣಸೆಯಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಗಾಗಿ ಪ್ರಸ್ತಾವನೆ ಕಳಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮುಂದಿನ ಮೂರು ವರ್ಷಗಳಲ್ಲಿ ದೇಶದ ವಿವಿಧೆಡೆ ಏಳು ಬೃಹತ್ ಜವಳಿ ಪಾರ್ಕ್‌ಗಳನ್ನು ಸ್ಥಾಪಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ರ ಬಜೆಟ್ ಮಂಡನೆ ಸಂದರ್ಭದಲ್ಲಿ ಪ್ರಕಟಿಸಿದ್ದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಏಕಗವಾಕ್ಷಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಂಜಾರ್ ಗಾರ್ಮೆಂಟ್ಸ್‌ನ ಮಾಲೀಕರಾದ ಮಂಜುನಾಥ ನಾಯ್ಕ, ತೋಳಹುಣಸೆಯಲ್ಲಿ ಈಗ ಮುಚ್ಚಿರುವ ಎಲ್ಲಮ್ಮ ಮಿಲ್‌ನ 138.14 ಎಕರೆ ಜಾಗ ಈಗ ಖಾಲಿ ಉಳಿದಿದೆ. ಈ ಜಾಗವು ರಾಷ್ಟ್ರೀಯ ಜವಳಿ ನಿಗಮದ ವಶದಲ್ಲಿದೆ. ಖಾಲಿ ಇರುವ ಈ ಜಾಗವನ್ನು ಬಳಸಿಕೊಂಡು ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪಿಸಲು ಅವಕಾಶವಿದೆ ಎಂದು ಹೇಳಿದರು.
ಇದಕ್ಕೆ ಸಮ್ಮತಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತೋಳಹುಣಸೆ ಬಳಿಯ ಎನ್.ಟಿ.ಸಿ. ಜಾಗದಲ್ಲಿ ಪಾರ್ಕ್ ಸ್ಥಾಪಿಸುವ ಪ್ರಸ್ತಾವನೆಗೆ ಏಕಗವಾಕ್ಷಿ ಸಭೆಯಲ್ಲಿ ತೀರ್ಮಾನ
ಏನಿದು ಮೆಗಾ ಟೆಕ್ಸ್‌ಟೈಲ್ ಪಾರ್ಕ್?
ದೇಶವನ್ನು ಜವಳಿ ವಲಯದ ಉತ್ಪಾದನಾ ಹಾಗೂ ರಫ್ತು ತಾಣವನ್ನಾಗಿ ಮಾಡಲು ಮತ್ತು ಜಾತಿಕ ರಫ್ತು ಬಲಿಷ್ಠ ದೇಶವನ್ನಾಗಿ ಮಾಡಲು ಕೇಂದ್ರ ಸರ್ಕಾರ ಏಳು ಮೆಗಾ ಟೆಕ್ಸ್‌ಟೈಲ್ ಪಾರ್ಕ್ಗಳ ಸ್ಥಾಪನೆಗೆ ಉದ್ದೇಶಿಸಿದೆ.
ಕಳೆದ ಸೋಮವಾರ ಮಂಡಿಸಲಾದ ಬಜೆಟ್ನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತಲಾ 1,000 ಎಕರೆ ಪ್ರದೇಶದಲ್ಲಿ ಪಾರ್ಕ್‌ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ನಿರ್ಮಿಸಲಾಗುವುದು ಎಂದು ತಿಳಿಸಿದ್ದರು.
ಈ ಪಾರ್ಕ್ಗಳಲ್ಲಿ ವಿಶ್ವ ದರ್ಜೆಯ ಮೂಲಭೂತ ಸೌಲಭ್ಯ ಹಾಗೂ ಉತ್ಪಾದನೆಗೆ ಸಜ್ಜಾಗಿರುವಂತಹ ವ್ಯವಸ್ಥೆ ಕಲ್ಪಿಸಲಾಗುವುದು. ಇದರ ಜೊತೆಗೆ 10,683 ಕೋಟಿ ರೂ.ಗಳ ಉತ್ಪಾದನಾ ಆಧರಿತ ಉತ್ತೇಜನ ನೀಡಲಾಗುವುದು ಎಂದೂ ಸಹ ಕೇಂದ್ರ ಬಜೆಟ್ನಲ್ಲಿ ತಿಳಿಸಲಾಗಿದೆ.
ಪ್ರಸ್ತಾಪಿತ ಯೋಜನೆಯ ಪೂರ್ಣ ಹೆಸರು ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ರೀಜನ್ ಅಂಡ್ ಅಪ್ಪೇರೆಲ್ ಪಾರ್ಕ್ (ಮಿತ್ರ) ಆಗಿದೆ. ಕೇಂದ್ರ ಸರ್ಕಾರ 2025-26ರ ವೇಳೆಗೆ ಭಾರತದ ಕೈಗಾರಿಕಾ ಗಾತ್ರವನ್ನು ದುಪ್ಪಟ್ಟುಗೊಳಿಸಿ 300 ಶತಕೋಟಿ ಡಾಲರ್ಗಳಿಗೆ ತಲುಪಿಸುವ ಗುರಿ ಹೊಂದಿದೆ. §ಮಿತ್ರ¬ ಅದರ ಪ್ರಮುಖ ಭಾಗವಾಗಿದೆ. ಈ ಪಾರ್ಕ್ಗಳಲ್ಲಿ ಅನಿರ್ಬಂಧಿತವಾದ ನೀರು ಹಾಗೂ ವಿದ್ಯುತ್ ಸೌಲಭ್ಯ, ಸಾಮಾನ್ಯ ಸೌಲಭ್ಯಗಳು ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯದ ರೀತಿಯ ಸೌಲಭ್ಯಗಳನ್ನು ಕಲ್ಪಿಸಲು ಉದ್ದೇಶಿಸಲಾಗಿದೆ.
ಚೀನಾ, ವಿಯಟ್ನಾಂ ಹಾಗೂ ಇಥಿಯೋಪಿಯಾ ಸೇರಿದಂತೆ ಹಲವು ದೇಶಗಳಲ್ಲಿ ಈ ರೀತಿಯ ಪಾರ್ಕ್ಗಳಿವೆ. ಇಲ್ಲಿ ಜವಳಿ ವಲಯಕ್ಕೆ ಅಗತ್ಯವಾದ ಎಲ್ಲ ಸೌಲಭ್ಯಗಳು ಒಂದೇ ತಾಣದಲ್ಲಿ ಲಭ್ಯವಿವೆ.
ಕೇಂದ್ರ ಸರ್ಕಾರ ಈ ಹಿಂದೆ 2005ರಲ್ಲಿ 59 ಎಸ್.ಐ.ಟಿ.ಪಿ. ( ಸ್ಕೀಮ್ ಫಾರ್ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ಪಾರ್ಕ್ಸ್) ಜವಳಿ ಪಾರ್ಕ್ಗಳಿಗೆ ಅನುಮತಿ ನೀಡಿತ್ತು. ಇವುಗಳಲ್ಲಿ 22 ಪೂರ್ಣಗೊಂಡಿವೆ. ಆದರೆ, ಇವುಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಮಿತ್ರ ಪಾರ್ಕ್ಗಳಿಗೆ ಮುಂದಾಗಲಾಗಿದೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಮಂಜುನಾಥ ನಾಯ್ಕ, ದಾವಣಗೆರೆ ಈ ಹಿಂದೆ ಕರ್ನಾಟಕದ ಮ್ಯಾಂಚೆಸ್ಟರ್ ಎಂಬ ಹೆಗ್ಗಳಿಕೆ ಹೊಂದಿತ್ತು. ತೋಳಹುಣಸೆಯಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಯಾದರೆ ಆ ಹೆಗ್ಗಳಿಕೆ ಮತ್ತೆ ಮರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲಮ್ಮ ಮಿಲ್‌ನ 138.14 ಎಕರೆ ಜಾಗ ಖಾಲಿ ಇದೆ. ಇದನ್ನು ರಾಷ್ಟ್ರೀಯ ಜವಳಿ ನಿಗಮ ನಿರ್ವಹಿಸುತ್ತಿದೆ. ಪ್ರತಿ ವರ್ಷ ಖಾಲಿ ಜಾಗವನ್ನು ಕಾಯಲಿಕ್ಕಾಗಿಯೇ 34-35 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. ಹೀಗಾಗಿ ಈ ಜಾಗವನ್ನು ಉತ್ಪಾದನೆಗೆ ಬಳಸಿಕೊಂಡರೆ ವೆಚ್ಚ ಮಾಡುವುದು ತಪ್ಪಲಿದೆ ಎಂದರು. ಖಾಲಿ ಇರುವ ಎಲ್ಲಮ್ಮ ಮಿಲ್ ಜಾಗವನ್ನು ಬಳಸಿಕೊಳ್ಳುವ ಬಗ್ಗೆ ಲೋಕಸಭೆಯ ಸ್ಥಾಯಿ ಸಮಿತಿಯಲ್ಲೂ ಈ ಬಗ್ಗೆ ಚರ್ಚೆ ನಡೆಸಲಾಗಿತ್ತು. ಈ ಜಾಗವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಬಗ್ಗೆ ಗಂಭೀರವಾದ ಚರ್ಚೆಗಳು ನಡೆದಿವೆ ಎಂದವರು ಹೇಳಿದರು.
ಜವಳಿ ಪಾರ್ಕ್ ಸ್ಥಾಪನೆಗೆ ಸಂಬಂಧಿಸಿದಂತೆ ಈ ಹಿಂದೆಯೇ ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಪ್ರಹ್ಲಾದ್ ಜೋಷಿ ಹಾಗೂ ಸದಾನಂದ ಗೌಡ ಅವರ ಜೊತೆ ಉದ್ಯಮಿಗಳು ಚರ್ಚಿಸಿದ್ದೆವು. ಜಿಲ್ಲಾ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಂಡ ನಂತರವೇ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದ್ದರು. ಅದರಂತೆ ಏಕಗವಾಕ್ಷಿ ಸಭೆಯಲ್ಲಿ ಪ್ರಸ್ತಾವನೆ ಕಳಿಸಲು ಸಮ್ಮತಿಸುವುದರೊಂದಿಗೆ ಈ ದಿಸೆಯಲ್ಲಿ ಮೊದಲ ಹೆಜ್ಜೆ ಇಡಲಾಗಿದೆ ಎಂದು ಹೇಳಿದರು.