ಜನಪ್ರತಿನಿಧಿಗಳಿಗೆ ಸಂಗೀತ, ಸಾಹಿತ್ಯದ ತರಬೇತಿ ಅಗತ್ಯ

ಮಾರ್ಗ ಬಿಟ್ಟು ಹೋಗುವ ಮಠಾಧೀಶರು

ಬೇರೆ ಬೇರೆ ಕಾರಣಗಳಿಗಾಗಿ ಮಾರ್ಗದರ್ಶನ ಮಾಡಬೇಕಾದವರು ಮಾರ್ಗ ಬಿಟ್ಟು ಹೋಗುತ್ತಿದ್ದಾರೆ ಎಂದು ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ಮಠಗಳು, ಸ್ವಾಮೀಜಿಗಳು ಶಿಷ್ಯರನ್ನು ಸನ್ಮಾರ್ಗದಲ್ಲಿ ಕರೆದೊಯ್ಯಬೇಕು. ಜಾತಿಯ ಮನೋಭಾವನೆ ಕಿತ್ತು ಹಾಕಿ, ಜ್ಯೋತಿ ಸ್ವರೂಪರಾಗಿ ಬಾಳಬೇಕು. ಆದರೆ ಇಂದು ಏನೇನೋ ಕಾರಣಗಳಿಂದಾಗಿ ತಮ್ಮ ತನ ಕೆಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ದಾವಣಗೆರೆ, ಫೆ.6- ಗ್ರಾಮ ಪಂಚಾಯ್ತಿಯಿಂದ ಲೋಕಸಭೆ ವರೆಗಿನ ಜನಪ್ರತಿನಿಧಿಗಳಿಗೆ ಸಂಗೀತ, ಸಾಹಿತ್ಯ ಕಲೆಯ ತರಬೇತಿಯ ಅಗತ್ಯವಿದೆ ಎಂದು ಸಾಣೇಹಳ್ಳಿ ಶ್ರೀಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು.

ನಗರದ ಮಾಗನೂರು ಬಸಪ್ಪ ಸಭಾಂಗಣದಲ್ಲಿ  ಶನಿವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಜನಪ್ರತಿನಿಧಿಗಳಿಗೆ ಸಂಗೀತ, ಸಾಹಿತ್ಯ, ಕಲೆಯ ತರಬೇತಿ ನೀಡಿದಾಗ ಅವರಲ್ಲಿರುವ ಅವಗುಣಗಳು ಕಡಿಮೆಯಾಗಿ, ಸದ್ಗುಣಗಳು ಹೆಚ್ಚಾಗುತ್ತವೆ. ಇದು ಸಮಾಜ ಮುಖಿಯಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಇಂದು ಯಾವುದೇ ಸಂಸ್ಕಾರ ಇಲ್ಲದೆ, ಕೇವಲ ಹಣ, ಜಾತಿ ಮತ್ತಿತರೆ ಕಾರಣಗಳಿಂದಾಗಿ ರಾಜಕೀಯಕ್ಕೆ ಬಂದವರ ವರ್ತನೆ ಯಾವ ರೀತಿ ಇರುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಅಧಿಕಾರಿಗಳ ಜೊತೆ, ಜನಪ್ರತಿನಿಧಿಗಳ ಜೊತೆ ಹೇಗೆ ವರ್ತಿಸಬೇಕೆಂಬ ಕನಿಷ್ಟ ಅರಿವೂ ಅವರಿಗೆ ಇರುವುದಿಲ್ಲ. ಇದಕ್ಕೆ ಕಾರಣ ಅವರಲ್ಲಿ ಸಾಂಸ್ಕೃತಿಕ ನೆಲೆಗಟ್ಟು ಇಲ್ಲದೇ ಇರುವುದು ಎಂದು ಅಭಿಪ್ರಾಯಿಸಿದರು.

ಸಂಗೀತ ಕಲಿತವರು ಅದನ್ನು ಸದ್ವಿನಿಯೋಗ ಪಡಿಸಿಕೊಳ್ಳಬೇಕು. ಸಂಗೀತದಿಂದಲೇ ಕೆಲವರು ಕೋಟಿ ಕೋಟಿ ರೂ. ಸಂಪಾದನೆ ಮಾಡುತ್ತಿದ್ದಾರೆ. ನಾಟಕೋತ್ಸವಗಳಿಗೆ ಪ್ರತಿಷ್ಠಿತ ಸಂಗೀತಗಾರರನ್ನು ಆಹ್ವಾನಿಸಲು ಸಂಪರ್ಕಿಸಿದಾಗ ಕೆಲವರು 20 ರಿಂದ 40 ಲಕ್ಷ ರೂ. ಸಂಭಾವನೆ ಕೇಳುತ್ತಾರೆ. ಅವರೆಲ್ಲಾ ಅರಮನೆಯ ಸಂಗೀತಗಾರರು. ಆದರೆ ನಾವು ಬಯಸುವುದು ಬಯಲಿಗೆ ಬಂದು ಹಾಡುವ ಬಯಲು ಮನೆಯ ಸಂಗೀತಕಾರರನ್ನು ಎಂದು ಹೇಳಿದರು.

ಅವರು ಹಾಡುತ್ತಲೇ ಖ್ಯಾತರಾಗಿದ್ದಾರೆ. ಸಂಗೀತ ಕೆಲವೇ ವ್ಯಕ್ತಿಗಳಿಗೆ ಮಾತ್ರ ಮೀಸಲಾಗಿಲ್ಲ. ಸಾಧನೆ ಮಾಡಿದ ಎಲ್ಲರಿಗೂ ಕೈ ವಶವಾಗುತ್ತದೆ.  ಮನಸ್ಸು ಮಾಡಿದ ಎಲ್ಲರೂ ಶ್ರೇಷ್ಠ ಸಂಗೀತಕಾರರಾಗಲು ಸಾಧ್ಯವಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚು ಅಂಕ ಗಳಿಸಲೆಂದು ಆಟ, ಸಂಗೀತ, ನೃತ್ಯ, ನಾಟಕದಂತಹ ಕಲೆಗಳನ್ನು ಪರಿಚಯಿಸದೆ, ಕೇವಲ ಟ್ಯೂಷನ್‌ಗೆ ಸೀಮಿತಗೊಳಿಸುತ್ತಾರೆ.  ಇದು ಅನೇಕ ರೀತಿಯ ಅವಾಂತರಗಳಿಗೆ ಕಾರಣವಾಗುತ್ತದೆ. ಮಕ್ಕಳಿಗೆ ಅಂತರ್ ಬೋ ಧನೆಯೂ ಬೇಕಿದೆ. ಅದಕ್ಕಾಗಿ ಪೋಷಕರು ತಾವೂ ಉತ್ತಮ ಸಂಸ್ಕಾರ ಪಡೆದುಕೊಳ್ಳುವ ಜೊತೆಗೆ ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ ನೀಡಬೇಕು ಎಂದರು.

ರಂಗಭೂಮಿಗೂ ಸಂಗೀತಕ್ಕೂ ವಿಶೇಷ ಸಂಬಂಧವಿದೆ ಎಂದು ವಿಶ್ಲೇಷಿಸಿದ ಶ್ರೀಗಳು, ನಾಟಕದಲ್ಲಿ ಸಾಹಿತ್ಯ, ಸಂಗೀತ, ನೃತ್ಯ, ಅಭಿನಯ, ಮಾತುಗಾರಿಕೆ ಸೇರಿದಂತೆ ಎಲ್ಲಾ ಕಲೆಗಳು ಸಂಘಟಿತವಾಗುತ್ತವೆ. ಇವೆಲ್ಲವೂ ಸೇರಿದಾಗ ಓರ್ವ ಶ್ರೇಷ್ಠ ನಟನಾಗಲು ಸಾಧ್ಯ ಎಂದರು.

ಪ್ರತಿ ವ್ಯಕ್ತಿಯೂ ಉತ್ತಮ ನಟ. ಜೀವನದಲ್ಲಿ ನಟನೆಯೂ ಬೇಕು. ಆದರೆ ಅದು ಬದುಕಿನ ಸಹಜ ನಟನೆಯಾಗಿರಬೇಕು. ಕೃತಕತೆ, ಮೋಸ, ವಂಚನೆ ಆ ನಟನೆಯಲ್ಲಿ ಇರಬಾರದು. ಅದು ಮನೋಲ್ಲಾಸ ನೀಡಬೇಕು. ಮನೋವಿಕಾರಕ್ಕೆ ಕಾರಣವಾಗುವ ನಟನೆ ಅಗತ್ಯವಿಲ್ಲ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಸರ್ವಮಂಗಳ ಶಂಕರ್ ಅವರು, ಸಂಗೀತದಿಂದ ಆತ್ಮ ತೃಪ್ತಿ, ನೆಮ್ಮದಿ, ಮಾನಸಿಕ ಸ್ಥೈರ್ಯ ಲಭ್ಯವಾಗುತ್ತದೆ. ಸಂಗೀತ ಹಾಡುವವರಿಗೆ ಹೃದಯಾಘಾತದ ಸಂಭವ ಕಡಿಮೆ ಎಂದರು.

ಸಾಮವೇದ ಕಾಲದಿಂದ ಇಲ್ಲಿಯವರೆಗೆ ಸಂಗೀತ ಬೆಳೆದ ದಾರಿ ವಿವರಿಸಿದ ಅವರು, ಹಿಂದೂಸ್ಥಾನ ಸಂಗೀತ ಹಾಗೂ ಕರ್ನಾಟಕ ಸಂಗೀತ ಇಂದು ಬೃಹತ್ ಆಲದ ಮರದಂತೆ ಬೆಳೆದು ಪರಿಪೂರ್ಣ ಸುಮಧುರ ಸಂಗೀತ ನೀಡುತ್ತಿವೆ ಎಂದರು.

ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.  ಸಂಗೀತ ಶಿಕ್ಷಕ ಶಿವಬಸವ ಸ್ವಾಮಿ ಚರಂತಿಮಠ ಪಂ.ಪುಟ್ಟರಾಜ ಗವಾಯಿಗಳವರಿಗೆ ನುಡಿ ನಮನ ಸಲ್ಲಿಸಿದರು.

ದಾವಣಗೆರೆಯ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ಅಧ್ಯಕ್ಷೆ ಪಂಕಜಾಕ್ಷಿ ಎಂ.ಬಕ್ಕೇಶ್ ಅಧ್ಯಕ್ಷತೆ ವಹಿಸಿದ್ದರು.  ಚನ್ನವೀರಶಾಸ್ತ್ರಿ ಹಿರೇಮಠ, ಎ.ಹೆಚ್. ಶಿವಮೂರ್ತಿಸ್ವಾಮಿ, ಎಂ.ಬಿ. ನಾಗರಾಜ ಕಾಕನೂರು, ಬಿ.ವಾಮದೇವಪ್ಪ, ಸಣ್ಣಪ್ಪ ಸಿ.ಹೆದ್ನೆ ಇತರರು ಉಪಸ್ಥಿತರಿದ್ದರು.

ಪ್ರಾಸ್ತಾವಿಕವಾಗಿ ಎಂ.ಜಿ. ಶಶಿಕಲಾ ಮೂರ್ತಿ ಮಾತನಾಡಿದರು. ವೀರೇಶ್ವರ ಪುಣ್ಯಾಶ್ರಮದ ಮಕ್ಕಳು ಪ್ರಾರ್ಥಿಸಿದರು. ನಾಗ ರಾಜ ಸಿರಿಗೆರೆ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಹನುಮಲಿ ವಂದಿಸಿದರು. 

error: Content is protected !!