ಮಡುಗಟ್ಟಿದ ದುಃಖದೊಂದಿಗೆ ಸಾಮೂಹಿಕ ಪೂಜೆ, ಮೌನ ಪ್ರತಿಭಟನೆ

ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ದಾವಣಗೆರೆಯ 10 ಜನ ಮಹಿಳೆಯರೂ ಸೇರಿದಂತೆ 12 ಜನರಿಗೆ ಹೆದ್ದಾರಿ ತಡೆದು ಭಾವಪೂರ್ಣ ಶ್ರದ್ಧಾಂಜಲಿ, ಅಷ್ಟಪಥ ರಸ್ತೆ ನಿರ್ಮಾಣಕ್ಕೆ ಆಗ್ರಹ

ಇಟ್ಟಿಗಟ್ಟಿ (ಧಾರವಾಡ), ಫೆ.6-   `ಆ ಹೆದ್ದಾರಿಯ ಮಧ್ಯದಲ್ಲಿ ಸಾಲು – ಸಾಲಾಗಿ ಫೋಟೋಗಳನ್ನಿಟ್ಟಿದ್ದರು. ಈ ಲೋಕದಿಂದ ದೂರವಾಗಿರುವ ಫೋಟೋಗಳಲ್ಲಿದ್ದವರಿಗೆ ಸಾಮೂಹಿಕವಾಗಿ ಪೂಜೆ ಸಲ್ಲಿಸುತ್ತಿದ್ದರು. ಅವರನ್ನು ಕಳೆದುಕೊಂಡವರ ಕುಟುಂಬಸ್ಥರಲ್ಲಿ ಕೆಲವರು ಫೋಟೋಗಳಿಗೆ ಪುಷ್ಪಗಳನ್ನಿಡುತ್ತಾ ಬಿಕ್ಕಿ – ಬಿಕ್ಕಿ ಅಳುತ್ತಿದ್ದರು. ಇನ್ನು ಕೆಲವರು ತಮಗೆ ಉಮ್ಮಳಿಸಿ ಬರುತ್ತಿದ್ದ ಕಣ್ಣೀರನ್ನು ಹಿಡಿದಿಟ್ಟುಕೊಂಡು ಪೂಜೆ ಸಲ್ಲಿಸುತ್ತಿದ್ದರು. ಮೌನವಾಗಿ ನಿಂತುಕೊಂಡಿದ್ದ ಮತ್ತೆ ಕೆಲವರ ಕಣ್ಣುಗಳು ತೇವಗೊಂಡಿದ್ದವು. ಸದಾ ವಾಹನಗಳ ಓಡಾಟದಿಂದ ಗಿಜಿಗುಡುತ್ತಿದ್ದ ಆ ಪ್ರದೇಶದಲ್ಲಿ ಸುಮಾರು 18 ನಿಮಿಷಗಳ ಕಾಲ ಮೌನ ಆವಾರಿಸಿತ್ತು.’

`ಜೀವಗಳ ರಕ್ಷಣೆ ಎಲ್ಲರ ಹೊಣೆ’, `ಸುರಕ್ಷತೆ ನಾಗರಿಕರ ಜವಾಬ್ದಾರಿ’, `ಅಪಘಾತದಲ್ಲಿ ಮಡಿದವರಿಗೆ ನಮ್ಮ ಶ್ರದ್ಧಾಂಜಲಿ’, `ಅಷ್ಟಪಥ ರಸ್ತೆ ನಿರ್ಮಾಣದ ಕಾಮಗಾರಿಯನ್ನು ತತ್‌ಕ್ಷಣವೇ ಪ್ರಾರಂಭಿಸಬೇಕು’, `ಬೇಜವಾಬ್ದಾರಿಯ ಜನನಾಯಕರು – ಅಧಿಕಾರಿಗಳಿಗೆ ದಿಕ್ಕಾರ’, `ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ದಿಕ್ಕಾರ’, `ರಸ್ತೆ ಸುರಕ್ಷತೆ ಎಂಬುದನ್ನು ಕೇವಲ ಬಾಯಿ ಮಾತಿನಲ್ಲಾಗಬಾರದು ; ಹಾಗೂ ಅದು ರಸ್ತೆ ಸುಧಾರಣೆಯೊಂದಿಗೆ ಆಗಬೇಕು’. 

– ಭಾವನಾತ್ಮಕ ಮತ್ತು ಆಕ್ರೋಶಭರಿತವಾದ ಈ ಎರಡೂ ದೃಶ್ಯಗಳು ಕಂಡು ಬಂದಿದ್ದು, ಹುಬ್ಬಳ್ಳಿ – ಧಾರವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ರುವ ಇಟ್ಟಿಗಟ್ಟಿ ಎಂಬ ಗ್ರಾಮದ ಬಳಿ.

ಕಳೆದ 22 ದಿನಗಳ ಹಿಂದೆ ಜನವರಿ 15ರ ಬೆಳಗಿನ ಜಾವ ಇಟ್ಟಿಗಟ್ಟಿ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಡಿದ ದಾವಣಗೆರೆಯ 10 ಮಹಿಳೆಯರೂ ಸೇರಿದಂತೆ ಒಟ್ಟು 12 ಜನರ ಕುಟುಂಬಸ್ಥರು ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದ ಮೂಲಕ ಶನಿವಾರ ಬೆಳಿಗ್ಗೆ ನಡೆಸಿದ ಮೌನ ಪ್ರತಿಭಟನೆಯ ಈ ದೃಶ್ಯ ಮನಮಿಡಿಯುವಂತಿತ್ತು. 

ಶಾಲಾ – ಕಾಲೇಜುಗಳ ಆತ್ಮೀಯ ಸಹಪಾಠಗಳಾಗಿದ್ದ 14 ಜನರು ಸೇರಿದಂತೆ ಒಟ್ಟು 17 ಜನರು ಎರಡು ದಿನಗಳ ಗೋವಾ ಪ್ರವಾಸಕ್ಕಾಗಿ ಮಕರ ಸಂಕ್ರಮಣದ ಮರುದಿನ ಬೆಳಗಿನ ಜಾವ ನಗರದಿಂದ ಹೋರಟಾಗ, ಅವರು ಪ್ರಯಾಣಿಸುತ್ತಿದ್ದ ಕೆಎ 64 – 1316 ಸಂಖ್ಯೆಯ ಮಿನಿ ಬಸ್ ಮತ್ತು ಕೆಎ 22-ಸಿ 1649 ಸಂಖ್ಯೆಯ ಟಿಪ್ಪರ್ ಲಾರಿ ನಡುವೆ ಇಟ್ಟಿಗಟ್ಟಿ ಬಳಿ ಡಿಕ್ಕಿಯಾದ ಪರಿಣಾಮ ಭೀಕರ ರಸ್ತೆ ಅಪಘಾತವಾಗಿದ್ದನ್ನು ಇಲ್ಲಿ ಸ್ಮರಿಸಬಹುದು. 

ಈ ಸ್ಥಳದಲ್ಲಿ ಈವರೆಗೂ ಸಾಕಷ್ಟು ರಸ್ತೆ ಅಪಘಾತಗಳಾಗಿದ್ದು, ಪೊಲೀಸ್ ವರದಿ ಪ್ರಕಾರ ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಆ ಮೂಲಕ ಇದು `ಅಪಘಾತ ಸ್ಥಳ’ ಎಂದು ಖ್ಯಾತಿ ಪಡೆದಿದೆ. ಅಪಘಾತಗಳು ನಡೆದಾಗಲೆಲ್ಲಾ ಅವರ ಕುಟುಂಬಸ್ಥರು ಮತ್ತು ಸಂಘ – ಸಂಸ್ಥೆಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿ, ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಆದರೆ, ಹೆದ್ದಾರಿ ತಡೆದು, ಮಡಿದವರ ಫೋಟೋಗಳನ್ನು ಸಾಲು – ಸಾಲಾಗಿಟ್ಟು ಪೂಜೆ ನಡೆಸುವುದರೊಂ ದಿಗೆ ಚುನಾಯಿತ ಪ್ರತಿನಿಧಿಗಳ ಮತ್ತು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವನ್ನು ಖಂಡಿಸಿ, ಮೌನ ಹಾಗೂ ಭಾವನಾತ್ಮಕ ಪ್ರತಿಭಟನೆ ನಡೆಸುವುದರ ಮೂಲಕ ಸರ್ಕಾರದ ಗಮನ ಸೆಳೆದಿದ್ದು ಬಹುಶಃ ಇದೇ ಪ್ರಥಮ ಎನ್ನಬಹುದು. ಇದರೊಂದಿಗೆ ಗಂಭೀರತೆಯಿಂದ ಅರ್ಥಪೂರ್ಣ ವಾಗಿ ಪ್ರತಿಭಟನೆ ನಡೆಸಿ, ಸರ್ಕಾರವನ್ನು ಎಚ್ಚರ ಗೊಳಿಸಬಹುದು ಎಂಬುದನ್ನು ಸಾವಿಗೀಡಾದವರ ಕುಟುಂಬಸ್ಥರು ತೋರಿಸಿಕೊಟ್ಟು, ಸಾರ್ವಜನಿಕರ ಪ್ರಶಂಸೆಗೊಳ್ಳಗಾಗಿದ್ದಾರೆ. 

ಸಾಲಾಗಿ ಹೊರಟ ಕಾರುಗಳು : ಶನಿವಾರ ಬೆಳಿಗ್ಗೆ 7ರ ಹೊತ್ತಿಗೆ ದಾವಣಗೆರೆಯ ಎಂ.ಸಿ.ಸಿ `ಬಿ’ ಬ್ಲಾಕ್‌ನಲ್ಲಿರುವ ಭಾರತೀಯ ವೈದ್ಯಕೀಯ ಸಂಘ (ಐಎಂಎ ಹಾಲ್)ದ ಕಚೇರಿ ಬಳಿ ಸೇರಿದ್ದ ಮೃತ 10 ಜನರ ಕುಟುಂಬಸ್ಥರು ಯಾವುದೇ ರೀತಿಯ ಘೋಷಣೆಗಳಿಲ್ಲದೇ ಧಾರವಾಡದ ಇಟ್ಟಿಗಟ್ಟಿಯತ್ತ ಹೊರಟರು.

ಎಲ್ಲಾ 10 ಜನ ಮಹಿಳೆಯರ ಕುಟುಂಬಸ್ಥರು, ಹಿತೈಷಿಗಳು, ಬಂಧುಗಳು, ಆತ್ಮೀಯರಿದ್ದ ಪ್ರತ್ಯೇಕ 50 ಕ್ಕೂ ಹೆಚ್ಚು ಕಾರುಗಳು ಸಾಲು – ಸಾಲಾಗಿ ಶಿಸ್ತು ಬದ್ಧವಾಗಿ ಚಲಿಸುತ್ತಿದ್ದಾಗ ಆ ಎಲ್ಲಾ ಕಾರುಗಳನ್ನು ಜನರು ರಸ್ತೆ ಬದಿಯಲ್ಲಿ ನಿಂತು ಆಶ್ಚರ್ಯದಿಂದ ನೋಡುತ್ತಿದ್ದರು. ಪ್ರತಿ ಕಾರುಗಳು ಗ್ಲಾಸುಗಳಿಗೆ ಅಂಟಿಸಿದ್ದ 10 ಮೃತ ಮಹಿಳೆಯರ ಫೋಟೋಗಳನ್ನು ಕಣ್ಣಿಲ್ಲಿ ಕಣ್ಣಿಟ್ಟು ನೋಡುತ್ತಿದ್ದ ಜನರು, ತಾವು ನಿಂತಲ್ಲೇ ಮೃತರ ಆತ್ಮಕ್ಕೆ ಶಾಂತಿ ಕೋರುತ್ತಿದ್ದರು. 

ಬೆಳಿಗ್ಗೆ 10.30ರ ವೇಳೆಗೆ ಇಟ್ಟಿಗಟ್ಟಿ ತಲುಪಿದ ಎಲ್ಲರೂ ಅಲ್ಲಿ ಸಿದ್ದ ಪಡಿಸಿದ್ದ ಫೋಟೋಗಳಿಗೆ  ಪುಷ್ಪಗಳನ್ನಿಟ್ಟು ಪೂಜೆ ಸಲ್ಲಿಸಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಶ್ರದ್ಧಾಂಜಲಿ ಮತ್ತು ಮೌನ ಪ್ರತಿಭಟನೆಯಿಂದಾಗಿ ಹೆದ್ದಾರಿಯಲ್ಲಿನ ವಾಹನ ಗಳ ಸಂಚಾರ ಅಸ್ತವ್ಯಸ್ತವಾಗದಂತೆ ಪೊಲೀಸರು ತುಂಬಾ ಅಚ್ಚುಕಟ್ಟಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದೂ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಮಡುಗಟ್ಟಿದ ದುಃಖದೊಂದಿಗೆ ಸಾಮೂಹಿಕ ಪೂಜೆ, ಮೌನ ಪ್ರತಿಭಟನೆ - Janathavani

ಹಕ್ಕೊತ್ತಾಯ : ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಹಲವರು, `ನಮ್ಮ ಪ್ರತಿಭಟನೆ ಯಾರ ವಿರುದ್ಧವೂ ಅಲ್ಲ; ನಮ್ಮನ್ನಗಲಿದ ಚೇತನಗಳಂತೆ ಮತ್ತೊಂದು ಚೇತನ ಈ ಲೋಕದಿಂದ ದೂರವಾಗಬಾರದು; ನಮ್ಮ ಮನೆಯಲ್ಲಿಯಾಗಿರುವ ಶೋಕವು ಇನ್ನೊಂದು ಮನೆಯಲ್ಲಾಗಬಾರದು ಎಂಬುದಷ್ಟೇ ನಮ್ಮ ಕಳಕಳಿ’ ಎಂದರು.

ಹುಬ್ಬಳ್ಳಿ – ಧಾರವಾಡ ಮಧ್ಯದ ದ್ವಿಪಥದ 33.3 ಕಿ.ಮೀ ಉದ್ದದ ಈ ಹೆದ್ದಾರಿ ತತ್‌ಕ್ಷಣವೇ ಅಷ್ಟಪಥ ರಸ್ತೆಯನ್ನಾಗಿ ನಿರ್ಮಾಣ ಮಾಡುವುದರ ಮೂಲಕ ರಸ್ತೆ ಅಪಘಾತಗಳನ್ನು ತಪ್ಪಿಸಬೇಕು ಎಂದು ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಆಗ್ರಹ ಪಡಿಸಿದರು.

ಹತ್ತು ತಾಯಂದಿರು ಸೇರಿದಂತೆ ಒಟ್ಟು 12 ಜನರ ಅಗಲಿಕೆಯಿಂದ ಅವರ ಕುಟುಂಬಕ್ಕೆ ಆಗಿ ರುವ ದುಃಖವನ್ನು ತುಂಬಿಕೊಡುವರು ಯಾರು? ಈ ದುಃಖವನ್ನು ತುಂಬಿಕೊಳ್ಳಲು ಅಷ್ಟು ಸುಲಭವೇ ? ಅವರು ಬಿಟ್ಟು ಹೋಗಿರುವ ಚಿಕ್ಕ ಚಿಕ್ಕ ಮಕ್ಕಳ ಗತಿಯೇನು ? ಆ ಮಕ್ಕಳ ಪೋಷಣೆ ಎಷ್ಟು ಕಷ್ಟ ಹೇಳಿ ? ಎಂಬಿತ್ಯಾದಿ ಪ್ರಶ್ನೆಗಳನ್ನು ಮೃತ ಕುಟುಂಬಸ್ಥರು ಕಣ್ಣೀರು ಸುರಿಸುತ್ತಾ ಪತ್ರಕರ್ತರ ಮುಂದೆ ಇಡುತ್ತಾ ಹೊರಟಾಗ, ಮಾಧ್ಯಮದವರ ಕಣ್ಣುಗಳೂ ತೇವಗೊಂಡಿದ್ದವು. 

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು : ಲೋಕಸಭೆಯ ಮಾಜಿ ಸದಸ್ಯ ಐ.ಜಿ.ಸನದಿ, ಜಗಳೂರು ಕ್ಷೇತ್ರದ ಮಾಜಿ ಶಾಸಕ ಟಿ.ಗುರುಸಿದ್ದನಗೌಡ, ಮಾಜಿ ಮುಖ್ಯಮಂತ್ರಿ ದಿ. ಜೆ.ಹೆಚ್.ಪಟೇಲ್ ಅವರ ಸಹೋದರಿ ಶ್ರೀಮತಿ ಅನುಸೂಯಮ್ಮ, ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್, ಧಾರವಾಡದ ಹಿರಿಯ ನ್ಯಾಯವಾದಿ ಪಾಂಡುರಂಗ ನಿರ್ಲಕರ್, ರಾಣೇಬೆನ್ನೂರಿನ ಮಾಹಿತಿ ಹಕ್ಕುದಾರ ಜೆ.ಎಂ.ರಾಜಶೇಖರ್, ಧಾರವಾಡ ಜಿಲ್ಲಾ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸುಧೀರ್ ಎಂ.ಮುಧೋಳ್ ಮತ್ತಿತರರು ಮಾತನಾಡಿದರು. 

ದಾವಣಗೆರೆಯ ಆರೈಕೆ ಆಸ್ಪತ್ರೆ ವೈದ್ಯ ಡಾ. ರವಿಕುಮಾರ್, ಬಾಪೂಜಿ ಆಸ್ಪತ್ರೆಯ ಅನಸ್ತೇಷಿಯಾ ತಜ್ಞ ಡಾ. ರವಿ, ಮಕ್ಕಳ ತಜ್ಞ ಡಾ. ರಮೇಶ್, ಡಾ. ಪ್ರಸನ್ನಕುಮಾರ, ಡಾ. ರಮೇಶ್, ಡಾ. ಸುರೇಶ್, ಡಾ.ಹಾಲಸ್ವಾಮಿ ಕಂಬಾಳಿಮಠ, ಡಾ. ಚಂದನ್, ಡಾ. ಸುನೀಲ್, ಡಾ. ಸುಬೋದ್ ಶೆಟ್ಟಿ, ಡಾ. ಗಣೇಶ್, ಬನ್ನಿಮಟ್ಟಿ ಚಂದ್ರಶೇಖರ್, ಜಿ.ಬಿ.ನಟೇಶ್, ಶಿವಕುಮಾರ್, ಜಿ.ಆರ್.ವಿನಯ್, ವೀರೇಶ್ ಬಿರಾದಾರ್, ರಾಜು ಬಾಬು, ಸಾಗರ್ ರಾರವಿ, ಸಿದ್ದಾರ್ಥ್ ಕುಂಚೂರು, ಶ್ರೀನಿವಾಸ್ ಮಾಡುಳಾ, ವಿನಯ್ ಮರುಳ, ಬೇತೂರು ಜಗದೀಶ್, ಬೇತೂರು ರಾಜೇಶ್, ಜಿ.ಬಿ.ನಿಶ್ಚಯ್, ಅಭಿಷೇಕ್ ಬಿರಾದಾರ್ ಹಾಗೂ ಸಂಬಂಧಿಕರು, ಸ್ನೇಹಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಡುಗಟ್ಟಿದ ದುಃಖದೊಂದಿಗೆ ಸಾಮೂಹಿಕ ಪೂಜೆ, ಮೌನ ಪ್ರತಿಭಟನೆ - Janathavani

ಮೃತ ಪಟ್ಟವರು : ಶ್ರೀಮತಿ ಪ್ರೀತಿ ರವಿಕುಮಾರ್, ಡಾ. ವೀಣಾ ಪ್ರಕಾಶ್, ಶ್ರೀಮತಿ ಮಂಜುಳಾ ನಟೇಶ್, ಶ್ರೀಮತಿ ರಾಜೇಶ್ವರಿ ಶಿವಕುಮಾರ್ ಬಂದಮ್ಮನವರ್, ಶ್ರೀಮತಿ ಪರಂಜ್ಯೋತಿ ಶಶಿಧರ್, ಶ್ರೀಮತಿ ವರ್ಷಿತಾ ವೀರೇಶ್, ಶ್ರೀಮತಿ ಹೇಮಲತಾ (ಮಾನಸಿ), ಶ್ರೀಮತಿ ವೇದಾ ಮಂಜುನಾಥ್, ಕು. ಕ್ಷೀರಾ ಸುರೇಶ್ ಬಾಬು, ಕು. ರಶ್ಮಿತಾ ಅವರುಗಳು ದಾವಣಗೆರೆಯವರಾಗಿದ್ದು, ಮಿನಿ ಬಸ್ಸಿನ ಚಾಲಕ ರಾಜು ಸೋಮಪ್ಪ ಗೊರಬಣ್ಣನವರ್, ನಿರ್ವಾಹಕ ಮಲ್ಲಿಕಾರ್ಜುನ್ ಅವರುಗಳು ರಾಣೇಬೆನ್ನೂರಿನವರಾಗಿದ್ದಾರೆ.

ಗಾಯಾಳುಗಳು : ದುರಂತದಲ್ಲಿ ಗಾಯ ಗೊಂಡಿದ್ದ ಶ್ರೀಮತಿ ನಿರ್ಮಲ ಚಂದ್ರಶೇಖರ್, ಶ್ರೀಮತಿ ಉಷಾರಾಣಿ ಡಾ. ರಮೇಶ್, ಶ್ರೀಮತಿ ಆಶಾ ಬೇತೂರು ಜಗದೀಶ್, ಶ್ರೀಮತಿ ಪೂರ್ಣಿಮ ಸುರೇಶ್ ಬಾಬು, ಶ್ರೀಮತಿ ರಾಮ ಲಕ್ಷ್ಮಿ (ರಜನಿ ಶ್ರೀನಿವಾಸ್) ಅವರುಗಳು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು, ಗುಣಮುಖರಾಗುತ್ತಿದ್ದಾರೆ. 

ತೀವ್ರ ರಕ್ತಸ್ರಾವ ಗಾಯಗೊಂಡಿದ್ದ ಶ್ರೀಮತಿ ಪ್ರವೀಣ ಪ್ರಕಾಶ್ ಅವರು  ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಮಡುಗಟ್ಟಿದ ದುಃಖದೊಂದಿಗೆ ಸಾಮೂಹಿಕ ಪೂಜೆ, ಮೌನ ಪ್ರತಿಭಟನೆ - Janathavaniಇ.ಎಂ. ಮಂಜುನಾಥ,
[email protected]

error: Content is protected !!