ದಾವಣಗೆರೆ, ಫೆ.7- ನಾಳೆ ದಿನಾಂಕ 8 ಮತ್ತು 9 ರಂದು ರಾಜನಹಳ್ಳಿಯಲ್ಲಿ ನಡೆಯಲಿರುವ ವಾಲ್ಮೀಕಿ ಜಾತ್ರೆಯಲ್ಲಿ ನಾಳೆ ದಿನಾಂಕ 8 ರಂದು ಅಪರಾಹ್ನ 3ಕ್ಕೆ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ನೌಕರರ ಸಮಾವೇಶ ಹಮ್ಮಿಕೊಂಡಿರುವುದಾಗಿ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ ಹಾಗೂ ಜಿಲ್ಲಾಧ್ಯಕ್ಷ ಬಿ. ಶ್ರೀನಿವಾಸ ನಾಯಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೆಪಿಎಸ್‌ಸಿ ಸದಸ್ಯ ಡಾ. ರಂಗರಾಜ ವನದುರ್ಗ ಅಧ್ಯಕ್ಷತೆ ವಹಿಸುವರು. `ಎಸ್ಪಿ’ ರವಿ ಡಿ. ಚನ್ನಣ್ಣನವರ್ ಸಮಾವೇಶ ಉದ್ಘಾಟಿಸಲಿ ದ್ದಾರೆ. ಪ.ಜಾ., ಪ.ಪಂ. ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ. ಶಿವಶಂಕರ್ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿ ದ್ದಾರೆ. ಕರ್ನಾಟಕ ರಾಜ್ಯ ಪ.ಪಂ. ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎ. ರಾಜಶೇಖರ್ ಮತ್ತಿತರರು ಭಾಗವಹಿಸಲಿದ್ದಾರೆ.
ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರ ಮಹತ್ವಾಕಾಂಕ್ಷೆಯ, ಬಡ ಮಕ್ಕಳಿಗೆ ವಿದ್ಯಾದಾನ ನೀಡುವ `ಏಕಲವ್ಯ ವಿದ್ಯಾನಿಧಿ’ ಯೋಜನೆ ಕುರಿತು ನಿರ್ಣಯ ಕೈಗೊಳ್ಳಲಾಗುವುದು.
ಸಿ.ಎಂ. ಗೆ ಮನವಿ : ಪ್ರತ್ಯೇಕ ಸಚಿವಾಲಯ, ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಶೇ. 7.5 ಮೀಸಲಾತಿ ನೀಡಬೇಕು. ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಬಡ್ತಿ ಮೀಸಲಾತಿ ಸಮರ್ಪಕವಾಗಿ ಅನುಷ್ಠಾನಗೊಳಿಸ ಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಲ್ಲಿಸುವುದಾಗಿ ತಿಪ್ಪೇಸ್ವಾಮಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಜಿ.ಎಂ. ನಾಯಕ್, ಡಾ. ನಂದಕುಮಾರ್, ಕೆ. ನಾಗರಾಜ್, ಆರ್.ಎಚ್. ಗೋವಿಂ ದಪ್ಪ, ಜಿ. ಅಣ್ಣಪ್ಪ, ಗುಂಡಪ್ಪ, ಎಸ್.ಕೆ. ಸ್ವಾಮಿ, ಯೋಗೀಶ್ ಇದ್ದರು.