ದಾವಣಗೆರೆ, ಜ.22- ದೇಶದ ಭವಿಷ್ಯ ವಿದ್ಯಾರ್ಥಿಗಳು. ಆದ್ದರಿಂದ ಉತ್ತಮ ಆರೋಗ್ಯ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಉತ್ತಮ ರಾಷ್ಟ್ರ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ವಿವೇಕಾನಂದರ ಆದರ್ಶಗಳು ಸರ್ವಕಾಲಿಕ. ಯುವ ಸಮೂಹ ಅವರ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರವೀಣ್ ನಾಯಕ್ ಹೇಳಿದರು.
ಇಲ್ಲಿನ ಎ.ಆರ್.ಎಂ. ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದಿಂದ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವೇಕಾನಂದರ ಹೆಸರು ಕೇಳಿದರೆ ಸಾಕು ಮೈ ರೋಮಾಂಚನಗೊಳ್ಳುತ್ತದೆ. ಕಣ ಕಣದಲ್ಲೂ ದೇಶ ಭಕ್ತಿ ತುಂಬಿಕೊಂಡಿದ್ದ ಆ ಮಹಾನ್ ಚೇತನ ಭಾರತ ದೇಶದ ವೈಶಿಷ್ಟ್ಯವನ್ನು ವಿಶ್ವಕ್ಕೆ ಪರಿಚಯಿಸಿದವರು. ಇಂದಿನ ಯುವಕರು ವಿವೇಕಾನಂದರ ಜೀವನ ಚರಿತ್ರೆ ಅಭ್ಯಾಸ ಮಾಡುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ವಿವೇಕಾನಂದರ ಜೀವನವೇ ಒಂದು ಸಂದೇಶವಾಗಿದೆ. ನಾವು ಹೆಚ್ಚು ಮಾತನಾಡುವುದಕ್ಕಿಂತ ಅವರ ಆದರ್ಶಗಳನ್ನು ಆಚರಣೆಗೆ ತರಬೇಕು. ಇಂದಿನ ಯುವಕರು ಅನೇಕ ವ್ಯಸನಗಳಿಗೆ ಬಲಿಯಾಗುವ ಮೂಲಕ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದು ದುರಂತ. ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಇದು ಸೂಕ್ತ ಸಮಯ ಎಂದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್. ಅರುಣ್‌ಕುಮಾರ್ ಮಾತನಾಡಿ, ಯುವಕರು ರಾಷ್ಟ್ರದ ದಿವ್ಯ ಸಂಪತ್ತು ಮತ್ತು ಆಶಯ ಕೂಡ. ಅವರ ಶಕ್ತಿ ಸಾಮರ್ಥ್ಯಗಳು ಒಂದು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ. ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಜಾತಿ, ಧರ್ಮ, ಭಾಷೆ ಎಲ್ಲವನ್ನೂ ಮೀರಿ ಮನುಷ್ಯರನ್ನು ಪ್ರೀತಿಸುವುದನ್ನು ಮೊದಲ ಬಾರಿಗೆ ವಿವೇಕಾನಂದರು ಪ್ರತಿಪಾದಿಸಿದರು. ಎಲ್ಲಾ ದೌರ್ಬಲ್ಯಗಳನ್ನು ಮೀರಿ ಸದೃಢ ಸಮಾಜ ನಿರ್ಮಿಸಬಹುದು ಎಂಬುದನ್ನು ತೋರಿಸಿಕೊಟ್ಟ ಮೊದಲ ಸಂತ. ವಿವೇಕಾನಂದರಿಗೆ ಯುವ ಶಕ್ತಿಯ ಮೇಲೆ ಅಪಾರ ನಂಬಿಕೆ ಇತ್ತು. ನನಗೆ 100 ಜನ ಗಟ್ಟಿಮುಟ್ಟಾದ ಯುವಕರನ್ನು ಕೊಡಿ, ನಾವು ನವಭಾರತವನ್ನು ನಿರ್ಮಾಣ ಮಾಡುತ್ತೇನೆ ಎನ್ನುತ್ತಿದ್ದರು ಎಂದು ಸ್ಮರಿಸಿದರು.
ಎ.ಆರ್.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಡಿ.ಹೆಚ್. ಪ್ಯಾಟಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ. ಮಂಜುನಾಥ್, ಪ್ರೊ. ಡಿ. ಅಂಜಿನಪ್ಪ, ಪ್ರೊ. ಎಂ.ಡಿ. ಅಣ್ಣಯ್ಯ, ಪ್ರೊ. ಕಾಡಜ್ಜಿ ಶಿವಪ್ಪ, ಸಿ.ಡಿ. ತ್ರಿವೇಣಿ, ಅರ್ಥಶಾಸ್ತ್ರ ಪ್ರಾಧ್ಯಾಪಕ ಶಾಂತಾನಾಯ್ಕ, ಉಪನ್ಯಾಸಕರಾದ ಸಿಂಧೂ, ಸಹಾಯಕ ಪ್ರಾಧ್ಯಾಪಕ ಮೌನೇಶ್ ಮತ್ತು ಇತರರು ಇದ್ದರು.