ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ

ಸ್ವಚ್ಛತೆ ಕೊರತೆಗೆ ಗರಂ ಆದ ಡಿಸಿ

ಕೂಡ್ಲಿಗಿ, ಜ.20- ತಾಲ್ಲೂಕು ಕೇಂದ್ರದ ಸಾರ್ವಜನಿಕ ಆಸ್ಪತ್ರೆಗೆ ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಿಪಾಟಿ ಸೋಮವಾರ ಮಧ್ಯಾಹ್ನ ದಿಢೀರ್ ಭೇಟಿ ನೀಡಿ ಆಸ್ಪತ್ರೆ ಆವರಣದಲ್ಲಿದ್ದ ಅಸ್ವಚ್ಛತೆ ಕಂಡು ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಗರಂ ಆದ ಘಟನೆ ನಡೆಯಿತು.

ತಾಲ್ಲೂಕಿನ  25 ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಆಯ್ಕೆ ಸಭೆ ಮುಗಿದ ನಂತರ ಪ್ರವಾಸಿ ಮಂದಿರಕ್ಕೆ ತೆರಳಿದ ಜಿಲ್ಲಾಧಿಕಾರಿಗಳು ನಂತರ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದರು.

ಆಸ್ಪತ್ರೆ ಆವರಣವನ್ನು ವೀಕ್ಷಿಸಲು ಮುಂದಾದಾಗ ಶವಾಗಾರ ಮತ್ತು  ಕೋವಿಡ್ ವಾರ್ಡ್ ಕಡೆ ಹೋಗುವ ರಸ್ತೆ ಸಮೀಪ ಪ್ಲಾಸ್ಟಿಕ್, ಬಳಸಿದ ಸಿರಿಂಜ್‌ಗಳನ್ನು ನೋಡಿ ಇದನ್ನು ಸ್ವಚ್ಛಗೊಳಿಸಲು ನಿಮಗೇನಾಗಿದೆ, ನಿಮ್ಮ ಮನೆಯನ್ನು ಹೀಗೆ ಇಟ್ಟುಕೊಳ್ಳುತ್ತೀರಾ ಎಂದು ಗರಂ ಆಗಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಮತ್ತು ತಾಲ್ಲೂಕು ವೈದ್ಯಾಧಿಕಾರಿಯನ್ನು ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಸಿಬ್ಬಂದಿಗಳ ವಸತಿಗೃಹಗಳತ್ತ ತೆರಳಿ ಅರ್ಧಕ್ಕೆ ನಿಂತ ಕಟ್ಟಡಗಳನ್ನು ವೀಕ್ಷಿಸಿ ಅದರ ಮಾಹಿತಿ ಪಡೆದರು. ಅಲ್ಲಿಯೂ ಸಹ ಸ್ವಚ್ಛತೆಯ ಕೊರತೆ ಕಂಡು, ಸ್ವಚ್ಛಗೊಳಿಸಿ ಇಲ್ಲವಾದಲ್ಲಿ ನಿಮ್ಮ ನ್ನೆಲ್ಲ ಅಮಾನತ್ತು ಮಾಡುತ್ತೇವೆ ಇದು ನಿಮಗೆ ಮೊದಲ ವಾರ್ನಿಂಗ್ ಎಂದು ಎಚ್ಚರಿಸಿದರು.  

ಈ ಸಂದರ್ಭದಲ್ಲಿ ಕೂಡ್ಲಿಗಿ ತಹಶೀಲ್ದಾರ್ ಮಹಾಬಲೇಶ್ವರ, ತಾಲ್ಲೂಕು ವೈದ್ಯಾಧಿಕಾರಿ ಡಾ. ಷಣ್ಮುಖನಾಯ್ಕ, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ವಿನಯ್ ಸೇರಿದಂತೆ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕೂಡ್ಲಿಗಿ ಪ.ಪಂ. ಮುಖ್ಯಾಧಿಕಾರಿ ಫಕೃದ್ದೀನ್,  ಪಂಚಾಯ್ತಿ ಕಿರಿಯ ಆರೋಗ್ಯ ನಿರೀಕ್ಷಕರಾದ ಗೀತಾ ವಿಜೇತ್, ಪ್ರಥಮ ದರ್ಜೆ ಸಹಾಯಕ ರಮೇಶ್, ಪೌರ ಕಾರ್ಮಿಕರು, ಕೂಡ್ಲಿಗಿ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗಳು ಆಸ್ಪತ್ರೆ ಆವರಣ ಮತ್ತು ಮುಂದಿನ ಚರಂಡಿಗಳನ್ನು ಸಂಜೆ ವೇಳೆಗೆ ಸ್ವಚ್ಛಗೊಳಿಸಿದ್ದು ಕಂಡುಬಂದಿತು.

ಸಾರ್ವಜನಿಕ ಆಸ್ಪತ್ರೆಯ ವಾರ್ಡ್ ಮತ್ತು ಆಸ್ಪತ್ರೆ ಒಳಗಡೆ ದಿನವೂ ಸ್ವಚ್ಛಗೊಳಿಸುತ್ತಿದ್ದು, ಹೊರ ಆವರಣದಲ್ಲಿ ವಸತಿ ಗೃಹಗಳ ಕಸವನ್ನು ಇಂದು ಅಲ್ಲಿಯೇ ಹಾಕಿದ್ದು ಮತ್ತು ಶವಾಗಾರ ಆವರಣ ಮತ್ತು ಆಂಬ್ಯುಲೆನ್ಸ್ ಸ್ವಚ್ಛ ಗೊಳಿಸಿದ ಕಸ ಇತ್ತು. ಅದನ್ನು ನಿನ್ನೆಯೇ ಸ್ವಚ್ಛಗೊಳಿಸಲು ಮುಂದಾಗಿದ್ದೆವು, ಅಷ್ಟರಲ್ಲಿ ಜಿಲ್ಲಾಧಿಕಾರಿಗಳು ಭೇಟಿ ನೀಡಿದರು. ಸಂಜೆಯೊಳಗೆ ಸ್ವಚ್ಛಗೊಳಿಸಲಾಯಿತು ಎಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ವಿನಯ್ ತಿಳಿಸಿದರು.

ಹಂದಿ ಮಾಲೀಕರಿಗೆ ಎಚ್ಚರಿಕೆ: ಪಟ್ಟಣದ ಆಸ್ಪತ್ರೆ ಆವರಣ ಹಾಗೂ ಪಟ್ಟಣದಲ್ಲಿ ಹಂದಿಗಳ ಹಾವಳಿ ಜಾಸ್ತಿಯಾಗಿದ್ದು, ಇತ್ತೀಚೆಗೆ ಪಟ್ಟಣ ಪಂಚಾಯ್ತಿ ಯಿಂದ ಹಂದಿಗಳನ್ನು ಹಿಡಿದು ಕಳುಹಿಸಲಾಗಿತ್ತು.  ಮತ್ತೆ ಹಂದಿಗಳು ಹೆಚ್ಚಾಗಿದ್ದು, ಹಂದಿ ಮಾಲೀಕರನ್ನು ಕರೆಯಿಸಿ ಹಂದಿಗಳನ್ನು ಪಟ್ಟಣದ ಹೊರಗಡೆ ಸಾಕಬೇಕು, ಪಟ್ಟಣದ ಒಳಗೆ ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು  ಅಪರ ಜಿಲ್ಲಾಧಿಕಾರಿ ಮಂಜುನಾಥ ಅವರು ಎಚ್ಚರಿಕೆ ನೀಡಿದರು.  

error: Content is protected !!