ಸತ್ಯ…

ಕಣ್ಮುಂದೆ ನಡೆದು ಹಾದು ಹೋದ ಅದೆಷ್ಟೋ ಘಟನೆಗಳು
ನಡೆಯಲಾಗದೆ ತೆವಳಲಾಗದೆ ಏಳಲಾಗದೆ
ಕೂರಲಾಗದೆ ಕಂಬನಿ ಮಿಡಿದ ಕ್ಷಣಗಳು
ಸಂಬಂಧಗಳಿಗೆ ಬೇಲಿ ಕಟ್ಟಿಕೊಂಡು ಸ್ವಯಂ ಬಂಧಿಯಾಗುವ ಭಾವನೆಗಳು
ಬದುಕಲು ಇಚ್ಛಿಸುವ ಬಯಕೆಗಳಿಗೆ ಬಲವಂತವಾಗಿ
ಹೇರಲಾದ ನಿರ್ಬಂಧಗಳು.

ಎದುರುಗೊಂಡವರು ಹೇಗಿದ್ದೀಯೆಂದು
ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮೂಕರಾಗುವ ಮನಸ್ಥಿತಿ
ಬಾಯ್ತೆರೆದು ಮಾತಾಡೆಂದು ಹೇಳುವ ನಮ್ಮೊಳಗಡಗಿದವನ
ಮನವಿಗೂ ಕಿವಿಗೊಡದ ಪರಿಸ್ಥಿತಿ

ಎಲ್ಲವೂ ಗೊತ್ತಿದೆಯೆಂಬಂತೆ ಎಲ್ಲರನ್ನೂ
ಬೆರಗುಗೊಳಿಸಿ, ಚಕಿತರನ್ನಾಗಿಸಿ ಹುಸಿನಗೆ ನಗುವ ನಮ್ಮದೇ ಮನಸು
ತಲೆಯೊಳಗೆ ತಿರುಳಿಲ್ಲವೆಂದರಿತವರೆದುರು
ಆಶಾಗೋಪುರದಂತೆ ಉರಿದು ಬೀಳುವ ನಾವೇ
ಕೊಚ್ಚಿಕೊಂಡು ಕಟ್ಟಿಕೊಂಡಂತಹ ಕನಸು.

ಹೀಗೂ ಬದುಕಬಹುದೆಂಬ ಗೋಜಿಗೆ ಹೋಗದೆ
ಹೀಗೇ ಬದುಕಬೇಕೆಂಬ ಕಟ್ಟುಪಾಡುಗಳ ಜೊತೆ ನಡೆಯುತಿದೆ ಪಯಣ
ತನುವಿಗೊಂದು ಉಸಿರಿದ್ದಂತೆ ಅಂತಃಕರಣದೊಳಗೊಂದು ಲೋಕವಿಹುದು
ಸಾಗಲೇಬೇಕಿದೆ ಬದುಕು ವಾಸ್ತವದ ಸತ್ಯದೊಂದಿಗೆ ನಿತ್ಯೋತ್ಸವವಾಗಿ


ದೇಸು ಆಲೂರು…

error: Content is protected !!