ದಾವಣಗೆರೆ, ಡಿ. 29 – ಬಿಜೆಪಿ ರಾಜ್ಯ ನಾಯಕರ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೀಡುತ್ತಿರುವ ಹೇಳಿಕೆಗಳ ಬಗ್ಗೆ ವರಿಷ್ಠರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ಏನೇ ವಿಷಯಗಳಿದ್ದರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಇಲ್ಲವೇ ಇತರೆ ಕೇಂದ್ರ ನಾಯಕರ ಜೊತೆ ಮಾತನಾಡಬೇಕು. ಸಾರ್ವಜನಿಕವಾಗಿ ಇಲ್ಲ ವೇ ಮಾಧ್ಯಮಗಳ ಎದುರು ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದವರು ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಜೋಷಿ, ಪ್ರಧಾನ ಮಂತ್ರಿ ಸೇರಿದಂತೆ ಎಲ್ಲ ಸಂಬಂಧಿಸಿದವರ ಜೊತೆ ಚರ್ಚೆ ನಡೆಸಿದ ನಂತರ ರಾಷ್ಟ್ರೀಯ ಅಧ್ಯಕ್ಷರು ಹೊಸ ರಾಜ್ಯಾಧ್ಯಕ್ಷರನ್ನು ನೇಮಿಸಿದ್ದಾರೆ. ಏನಾದರೂ ತಪ್ಪು – ಸರಿ ಆಗುತ್ತಿದೆ ಎಂದರೆ ವರಿಷ್ಠರ ಜೊತೆ ಮಾತನಾಡಬೇಕು. ಬಹಿರಂಗ ಹೇಳಿಕೆ ಒಪ್ಪುವುದಿಲ್ಲ. ತಕ್ಷಣ ಇಂತಹ ಹೇಳಿಕೆ ನಿಲ್ಲಿಸಬೇಕು ಎಂದು ಹೇಳಿದರು. ಯತ್ನಾಳ್ ಹಾಲಿ ಶಾಸಕರಿದ್ದಾರೆ. ಅವರ ಜೊತೆ ಮಾತನಾಡುವ ಇಲ್ಲವೇ ಕ್ರಮ ತೆಗೆದುಕೊಳ್ಳುವ ಬಗ್ಗೆ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೇಂದ್ರ ಘಟಕ ನಿರ್ಧರಿಸಲಿದೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಹಿಂದಿನ ಸರ್ಕಾರದಲ್ಲಿ 40 ಸಾವಿರ ಕೋಟಿ ರೂ.ಗಳ ಹಗರಣ ನಡೆದಿದೆ ಎಂದು ಯತ್ನಾಳ್ ಇತ್ತೀಚೆಗಷ್ಟೇ ಆರೋಪಿಸಿದ್ದರು. ಯತ್ನಾಳ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಪಕ್ಷದ ಒಂದು ವರ್ಗ ಒತ್ತಾಯಿಸುತ್ತಿದೆ.
ಪಕ್ಷದ ಪದಾಧಿಕಾರಿಗಳ ನೇಮಕದಲ್ಲಿ ಯಡಿಯೂರಪ್ಪ ಬಣಕ್ಕೆ ಮೇಲುಗೈ ಆಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಜೋಷಿ, ಪಕ್ಷದಲ್ಲಿರುವ ಎಲ್ಲರೂ ಬಿಜೆಪಿಯವರೇ. ಬಿಜೆಪಿಯಲ್ಲಿ ಇರುವ ಯಾರೇ ಆಗಲಿ ಒಬ್ಬರಿಗೆ ಆಪ್ತರು, ಇನ್ನೊಬ್ಬರಿಗೆ ಆಪ್ತರು ಎಂದಲ್ಲ ಎಂದು ತಿಳಿಸಿದರು.
ಬಿಜೆಪಿಯನ್ನು ಬುರುಡೆ ಸರ್ಕಾರ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಜೋಷಿ, 1971ರಲ್ಲಿ ಗರೀಬಿ ಹಟಾವೋ ಎಂದು ಹೇಳಿದ್ದ ಕಾಂಗ್ರೆಸ್ ಪಕ್ಷದವರಿಗೆ ಕನಿಷ್ಠ ಅಡುಗೆ ಅನಿಲ ಸಂಪರ್ಕ ಕೊಡಲೂ ಸಾಧ್ಯವಾಗಲಿಲ್ಲ ಎಂದು ಟೀಕಿಸಿದರು.
1960 ರಿಂದ 2014ರ ನಡುವೆ ಸೂರು ಒದಗಿಸುವ ಯೋಜನೆ ಎಂದು ಕೇವಲ 3.30 ಕೋಟಿ ಮನೆ ಕೊಟ್ಟರು. ನಾವು ಹತ್ತು ವರ್ಷಗಳಲ್ಲಿ 4 ಕೋಟಿ ಮನೆ ಕೊಟ್ಟಿದ್ದೇವೆ. ಯಾರದು ಬುರುಡೆ ಸರ್ಕಾರ? ಎಂದು ಪ್ರಶ್ನಿಸಿದರು.
ಕನ್ನಡ ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿರುವುದಕ್ಕೂ ಆಕ್ಷೇಪಿಸಿದ ಜೋಷಿ, ಕೆ.ಜೆ. ಹಳ್ಳಿ – ಡಿ.ಜೆ. ಹಳ್ಳಿಯಂತಹ ಪ್ರಕರಣಗಳಲ್ಲಿ ಆರೋಪಿಗಳನ್ನು ಕೈ ಬಿಡಲು ಪತ್ರ ಬರೆಯಲಾಗು ತ್ತದೆ. ಇಲ್ಲಿ ಕನ್ನಡ ಹೋರಾಟಗಾರರನ್ನು ಜೈಲಿಗೆ ಅಟ್ಟುವ ಕೆಲಸ ಮಾಡಲಾಗುತ್ತಿದೆ ಎಂದರು.
ಹೋರಾಟ ಮಾಡಿದವರಿಗೆ ಎಚ್ಚರಿಕೆ ಕೊಡಿ. ಹಿಂಸೆ ನಡೆದಿದ್ದರೆ ಸೀಮಿತವಾಗಿ ಪ್ರಕರಣಗಳನ್ನು ದಾಖಲಿಸಿ. ಈ ಹಿಂದೆಯೂ ಎಷ್ಟೋ ಪ್ರಕರಣಗಳನ್ನು ಹೀಗೇ ಬಿಡಲಾಗಿದೆ. ಕರ್ನಾಟಕದಲ್ಲಿ ಕನ್ನಡ ಪ್ರಧಾನ ಭಾಷೆ ಎಂದು ಬಾಯಿ ಮಾತಿನಲ್ಲಿ ಹೇಳುತ್ತಾ, ಈಗ ಪ್ರಕರಣ ದಾಖಲಿಸುತ್ತಿರುವುದು ಖಂಡನೀಯ ಎಂದರು.