ದಾವಣಗೆರೆ ದಕ್ಷಿಣಕ್ಕೆ ಎಸ್‌ಯುಸಿಐ ಅಭ್ಯರ್ಥಿಯಾಗಿ ಕೆ. ಭಾರತಿ ಸ್ಪರ್ಧೆ

ದಾವಣಗೆರೆ, ಏ.7- ಜಿಲ್ಲೆಯಲ್ಲಿ ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯೂನಿಸ್ಟ್‌) ಪಾರ್ಟಿಯಿಂದ ವಿಧಾನ ಸಭಾ ಚುನಾವಣೆಗೆ ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ ಕಾಂ. ಕೆ. ಭಾರತಿ ಸ್ಪರ್ಧಿಸಲಿದ್ದಾರೆ ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಬಿ.ಆರ್‌. ಅಪರ್ಣ ಹೇಳಿದರು.

ನಿನ್ನೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯೂನಿಸ್ಟ್‌) (ಎಸ್‌ಯುಸಿಐ) ಪಕ್ಷದ ವತಿಯಿಂದ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಒಟ್ಟು 13 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದ್ದು, ಜಿಲ್ಲೆಯ ಒಂದು ಕ್ಷೇತ್ರದಲ್ಲಿ ಮಾತ್ರ ಪಕ್ಷದಿಂದ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಮತದಾರರು ಮೂಲಭೂತ ಸಮಸ್ಯೆಗಳ ಬದಲಾವಣೆಗಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ರಾಜ್ಯದಲ್ಲಿ ಕೋಮುವಾದದ ರಾಜಕಾರಣ ಮೀತಿ ಮಿರಿದ್ದು, ಜನತೆ ಬೆಲೆ ಏರಿಕೆ, ನಿರುದ್ಯೋಗದಂತಹ ತೀವ್ರವಾದ ಬಿಕ್ಕಟ್ಟಿನಿಂದ ಬಳಲುತ್ತಿದ್ದಾರೆ ಎಂದರು.

ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯೂನಿಸ್ಟ್‌) ಪಾರ್ಟಿಯು ವರ್ಷವಿಡೀ ಜನರೊಂದಿಗೆ ಬೆರೆಯುತ್ತಾ, ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಹಾಗಾಗಿ, ದಾವಣಗೆರೆ ದಕ್ಷಿಣ ವಿಧಾನಸಭಾ ಮತದಾರರು ಈ ಬಾರಿ ಎಸ್‌ಯುಸಿಐಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಎಸ್‌ಯುಸಿಐ ಅಭ್ಯರ್ಥಿ ಕೆ. ಭಾರತಿ ಮಾತನಾಡಿ, ವಿವಿಧ ರಾಜಕೀಯ ಪಕ್ಷಗಳು ಜನರನ್ನು ಮೋಸಗೊಳಿಸಿ, ಆಮಿಷವೊಡ್ಡಿ ಚುನಾವಣೆಯಲ್ಲಿ ಗೆಲ್ಲುವ ಆಲೋಚನೆಯಲ್ಲಿದ್ದಾರೆ. ಆದರೆ, ಮತದಾರರು ಆಮಿಷಗಳಿಗೆ ಬಲಿಯಾಗದೇ ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಅಭ್ಯರ್ಥಿಗೆ ಮತ ನೀಡಬೇಕು.

ದಕ್ಷಿಣ ವಿಧಾನ ಸಭಾ ವ್ಯಾಪ್ತಿಯಲ್ಲಿ ಪಡಿತರ ವ್ಯವಸ್ಥೆಯಲ್ಲಿ ಆಗುತ್ತಿದ್ದ ಅನ್ಯಾಯ, ಮುದ್ದಾಭೋವಿ ಕಾಲೋನಿಯ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ, ರಾಜಕಾಲುವೆ ದುರಸ್ತಿ, ಕೆ.ಆರ್‌ ಮಾರುಕಟ್ಟೆಯ ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆಗಳು ಸೇರಿದಂತೆ ಅನೇಕ ಹೋರಾಟಗಳನ್ನು ಕೈಗೊಂಡು ನ್ಯಾಯ ಒದಗಿಸಲು ಶ್ರಮಿಸಲಾಗಿದೆ ಎಂದ ಅವರು, ಈ ಬಾರಿ ಚುನಾವಣೆಯಲ್ಲಿ ಜನರು ಎಸ್‌ಯುಸಿಐಗೆ ಮತ ನೀಡುವ ಭರವಸೆ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್‌ ಕೈದಾಳೆ, ಮಧು ತೊಗಲೇರಿ, ತಿಪ್ಪೇಸ್ವಾಮಿ, ಟಿವಿಎಸ್‌ ರಾಜು, ಶಿವಾಜಿ ರಾವ್‌, ಗುರು ಮತ್ತಿತರರಿದ್ದರು.

error: Content is protected !!