ಕೊಕ್ಕನೂರಿನಲ್ಲಿ ಸಂಭ್ರಮದ ಗ್ರಾಮದೇವತೆ ಹಬ್ಬ

ಕೊಕ್ಕನೂರಿನಲ್ಲಿ ಸಂಭ್ರಮದ ಗ್ರಾಮದೇವತೆ ಹಬ್ಬ - Janathavaniಮಲೇಬೆನ್ನೂರು, ಏ.4- ಕೊಕ್ಕನೂರು ಗ್ರಾಮದಲ್ಲಿ 9 ವರ್ಷಗಳ ನಂತರ ಹಮ್ಮಿಕೊಂಡಿರುವ ಗ್ರಾಮದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವವು ಮಂಗಳವಾರ ಸಂಭ್ರಮದಿಂದ ಆರಂಭಗೊಂಡಿತು.

ಮಂಗಳವಾರ ಬೆಳಿಗ್ಗೆ ಯಿಂದಲೂ ಗ್ರಾಮದ ಎಲ್ಲಾ ಮಹಿಳೆಯರು ಸರದಿ ಸಾಲಿನಲ್ಲಿ ನಿಂತು ಶ್ರೀ ದುರ್ಗಾಂಬಿಕಾ ದೇವಿಗೆ ಉಡಿ ತುಂಬಿ ಭಕ್ತಿ ಸಮರ್ಪಿಸಿದರು.

ಗ್ರಾಮದೇವತೆ ಹಬ್ಬಕ್ಕಾಗಿ ಗ್ರಾಮ ನವ ವಧುವಿನಂತೆ ಸಿಂಗಾರಗೊಂಡಿದ್ದು, ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದೆ.

ಮಂಗಳವಾರ ತಡರಾತ್ರಿ ಆರಂಭಗೊಂಡ ಶ್ರೀ ದುರ್ಗಾಂಬಿಕಾ ದೇವಿಯ ಮೆರವಣಿಗೆಯು ಬುಧವಾರ ಬೆಳಗಿನ ಜಾವದವರೆಗೂ ನಡೆದು, ನಂತರ ದೇವಸ್ಥಾನ ಆವರಣದಲ್ಲಿ ಹಿಟ್ಟಿನ ಕೋಣನ ಬಲಿ ನೀಡಿ, ಚರಗ ಹಾಕಲಾಗುವುದು.

ಬುಧವಾರ ಬೆಳಿಗ್ಗೆಯಿಂದ ಸಂಜೆವರೆಗೂ ಭಕ್ತಾದಿಗಳಿಂದ ಬೇವಿನ ಉಡುಗೆ, ದಿಂಡು ಉರುಳು ಸೇವೆ ನಡೆಯಲಿವೆ. ಬುಧವಾರ ಮತ್ತು ಗುರುವಾರ ಸಂಜೆ ಹಾಸ್ಯಗಾ ರರಿಂದ ಮನೋ ರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ಬೆಳಿಗ್ಗೆ ಮಂಗಳವಾದ್ಯಗಳೊಂದಿಗೆ ಅಮ್ಮನ ಹಬ್ಬಕ್ಕೆ ತೆರೆ ಬೀಳಲಿದೆ.

ಮನೆಗಳು ಭರ್ತಿ : ಅಮ್ಮನ ಹಬ್ಬಕ್ಕಾಗಿ ಗ್ರಾಮದ ಎಲ್ಲಾ ಮನೆಗಳಿಗೆ ಮನೆಯ ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮ ಕ್ಕಳು ಸೇರಿದಂತೆ ಬಂಧು-ಮಿತ್ರರು ಆಗಮಿಸಿರುವುದರಿಂದ ಮನೆಗಳು ಜನರಿಂದ ಭರ್ತಿಯಾಗಿ ಮನೆಗಳಲ್ಲಿ ಸಂಭ್ರಮ ನೆಲೆಸಿದೆ.

ಬುಧವಾರ ಸಂಜೆಯಿಂದ ಬಾಡೂಟ ಆರಂಭವಾಗಲಿದ್ದು, ಗುರುವಾರ ರಾತ್ರಿವರೆಗೂ ನಡೆಯಲಿದೆ. ಅದಕ್ಕಾಗಿ ಮಾಂಸಹಾರಿಗಳ ಮನೆಗಳಲ್ಲಿ 1-4 ಕುರಿಗಳನ್ನು ಕಟ್ಟಿದ್ದಾರೆ. ಬುಧವಾರ ಸಂಜೆಯಿಂದ ಗುರುವಾರ ರಾತ್ರಿವರೆಗೂ ಕೊಕ್ಕನೂರು ಗ್ರಾಮದಲ್ಲಿ ಜನ ಜಾತ್ರೆ ನಡೆಯಲಿದೆ.

error: Content is protected !!