ಎಸ್ಸೆಸ್, ಎಸ್ಸೆಸ್ಸೆಂ ಹರ್ಷ
ದಾವಣಗೆರೆ, ಏ.3- ನಗರದ ಪ್ರತಿಷ್ಠಿತ ಬಾಪೂಜಿ ಕೋ-ಆಪರೇಟಿವ್ ಬ್ಯಾಂಕ್ ಕಳೆದ ಮಾರ್ಚ್ 31ಕ್ಕೆ ಮುಕ್ತಾಯಗೊಂಡ 2022-23 ನೇ ಸಾಲಿನ ಹಣಕಾಸು ವರ್ಷದಲ್ಲಿ ರೂ.14.45 ಕೋಟಿ ಲಾಭ ಗಳಿಸಿದ್ದು ಒಟ್ಟು ಲಾಭದಲ್ಲಿ ಆದಾಯ ತೆರಿಗೆ ಮತ್ತು ಇತರೆ ಅವಕಾಶಗಳನ್ನು ಕಲ್ಪಿಸಿದ ನಂತರ ರೂ.8.75 ಕೋಟಿ ನಿವ್ವಳ ಲಾಭ ಗಳಿಸಿದ್ದು ಬ್ಯಾಂಕು ಕಳೆದ ಸಾಲಿಗಿಂತ ಈ ವರ್ಷ ರೂ.1.37 ಕೋಟಿ ಹೆಚ್ಚಿನ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರು ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ, ಉಪಾಧ್ಯಕ್ಷರು ಹಾಗೂ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ನಿರ್ದೇಶಕ ಮಂಡಲಿಯ ಸದಸ್ಯರುಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲಿ ಒಂದಾಗಿರುವ ಬಾಪೂಜಿ ಬ್ಯಾಂಕ್ ರೂ.14.45 ಕೋಟಿ ಲಾಭ ಗಳಿಸುವ ಮೂಲಕ ಜಿಲ್ಲೆಯಲ್ಲಿನ ಸಹಕಾರಿ ಬ್ಯಾಂಕುಗಳಲ್ಲೇ ಪ್ರಥಮ ಸ್ಥಾನದಲ್ಲಿ ಅಬಾಧಿತವಾಗಿ ಮುಂದುವರೆದಿದೆ. 10596 ಸದಸ್ಯರುಗಳನ್ನು ಹೊಂದಿರುವ ಬ್ಯಾಂಕಿನ ಷೇರು ಬಂಡವಾಳ ರೂ.16.05 ಕೋಟಿಗೇರಿದೆ. ರೂ.126.58 ಕೋಟಿ ನಿಧಿಗಳು, ರೂ.478.09 ಕೋಟಿ ವಿವಿಧ ಲಾಭದಾಯಕ ಭದ್ರತೆಗಳಲ್ಲಿ ತೊಡಗಣೆ ಮಾಡಿದೆ, ದುಡಿಯುವ ಬಂಡವಾಳ ರೂ.944.87 ಕೋಟಿ, ಠೇವಣಿ ರೂ.793.07 ಕೋಟಿ ಸಂಗ್ರಹ ವಾಗಿದ್ದು, ರೂ.402.11 ಕೋಟಿ ಸಾಲ ಸೌಲಭ್ಯವನ್ನು (ಭಾರತೀಯ ರಿಜರ್ವ್ ಬ್ಯಾಂಕಿನ ಆದೇಶದಂತೆ ಆಧ್ಯತಾರಂಗ ಮತ್ತು ದುರ್ಬಲ ವರ್ಗದವರ ನ್ನೊಳಗೊಂಡು) ಸದಸ್ಯರಿಗೆ ಕಲ್ಪಿಸ ಲಾಗಿದೆ. ಬ್ಯಾಂಕಿನ ಠೇವಣಿದಾರರ ಸುರಕ್ಷತೆಯ ದೃಷ್ಟಿಯಿಂದ ರೂಪಾಯಿ ಐದು ಲಕ್ಷದವರೆಗಿನ ಠೇವಣಿಗಳಿಗೆ ಡಿಪಾಜಿಟ್ ಇನ್ಸೂರೆನ್ಸ್ ಸ್ಕೀಮ್ ಚಾಲ್ತಿಯಲ್ಲಿರುತ್ತದೆ ಮತ್ತು ಕರ್ನಾಟಕ ರಾಜ್ಯ ಸರ್ಕಾರದ `ಯಶಸ್ವಿನಿ ನಗರ ಸಹಕಾರಿ ಆರೋಗ್ಯ ರಕ್ಷಣಾ ಯೋಜನೆ’ಯನ್ನು ಕೂಡ ಬ್ಯಾಂಕು ಅಳವಡಿಸಿ ಕೊಂಡಿದೆ. ಬ್ಯಾಂಕಿನ ಆಡಳಿತ ಮಂಡಲಿಯ ಸತತ ಪ್ರಯತ್ನದಿಂದಾಗಿ ಬ್ಯಾಂಕಿನ ಕಾರ್ಯಕ್ಷೇತ್ರ ವ್ಯಾಪ್ತಿಯ ಇಡೀ ರಾಜ್ಯದಾದ್ಯಂತ ವಿಸ್ತರಿಸಲು ಸಹಕಾರ ಇಲಾಖೆಯು ಅನುಮತಿ ನೀಡಿರುತ್ತದೆ. ಬ್ಯಾಂಕಿನ ಈ ಸಾಧನೆಗೆ ಎಲ್ಲಾ ಸದಸ್ಯರು, ಗ್ರಾಹಕರು, ಆಡಳಿತ ಮಂಡಲಿ, ರಿಜರ್ವ್ ಬ್ಯಾಂಕ್ ಮತ್ತು ಸಹಕಾರಿ ಸಂಘಗಳ ಇಲಾಖೆ ಮತ್ತು ರಾಜ್ಯ ಸಹಕಾರಿ ಮಹಾಮಂಡಳ ಹಾಗೂ ಸಿಬ್ಬಂದಿ ವರ್ಗದವರ ಸಹಕಾರವೇ ಮುಖ್ಯ ಕಾರಣವಾಗಿದೆ ಎಂದು ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕ ಮಂಡಲಿ ಸದಸ್ಯರುಗಳು ಹರ್ಷ ವ್ಯಕ್ತಪಡಿಸಿದ್ದಾರೆಂದು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಂ. ಬಸವರಾಜ್ ತಿಳಿಸಿರುತ್ತಾರೆ.