ಜನಾಂಗ ಹುಟ್ಟಿದ ಮೇಲೆ ಭಾಷೆ ಹುಟ್ಟಿದೆ, ಭಾಷೆ ಹುಟ್ಟಿದ ಮೇಲೆ ಶಬ್ದಗಳು ಹುಟ್ಟಿವೆ

ರಾಣೇಬೆನ್ನೂರಿನ ಕಾರ್ಯಕ್ರಮದಲ್ಲಿ ಶ್ರೀ ಪ್ರಭು ತೋಂಟದಾರ್ಯ ಸ್ವಾಮೀಜಿ

ರಾಣೇಬೆನ್ನೂರು, ಏ. 3 –  ಜನಾಂಗ ಹುಟ್ಟಿದ ಮೇಲೆ ಭಾಷೆ ಹುಟ್ಟಿದೆ. ಭಾಷೆಯು ಮನುಷ್ಯನ ಭಾವನೆಗಳಿಂದ ಉತ್ಪತ್ತಿಯಾದ ಶಬ್ದಗಳು. ಭಾಷೆ ಹುಟ್ಟಿದ ಮೇಲೆ ಶಬ್ದಗಳು ಹುಟ್ಟಿವೆ. ದಿವ್ಯ ಎಂಬ ಶಬ್ದದ ಧಾತುವಿನಿಂದ ದೇವ ಶಬ್ದ ಹುಟ್ಟಿದೆ ಎಂದು ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ನುಡಿದರು. 

ಇಲ್ಲಿನ ನಗರಸಭೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ವಿಶ್ವಧರ್ಮ ಪ್ರವಚನದಲ್ಲಿ ಭಾನುವಾರ ರಾತ್ರಿ ಆಶೀರ್ವಚನ ನೀಡಿದರು.

ದಿವ್ಯ ಎಂಬ ಶಬ್ದದ ಧಾತುವಿನಿಂದ ದೇವ ಶಬ್ದ ಉದ್ಘಾಟನೆಯಾಗಿದೆ. ಮನುಷ್ಯನ ಪ್ರತಿಯೊಂದು ಹೆಸರಿನಲ್ಲಿಯೂ ಪರಮಾತ್ಮನ ಶಬ್ದವಿದೆ. ಪ್ರತಿಯೊಂದು ಶಬ್ದದಲ್ಲಿ ಓಂಕಾರವಿದೆ. ದೇವರು ಯಾರಿಗೂ ಭೇದ ಭಾವ ಮಾಡುವ ಪ್ರಮೇಯವೇ ಇಲ್ಲ. ದೇವರ ಬಲದಿಂದ ಯಾರೂ ಶ್ರೀಮಂತ ಆಗುವುದಿಲ್ಲ. ಸ್ವಂತ ಶಕ್ತಿ ಮತ್ತು ಪ್ರಯತ್ನದಿಂದ ಶ್ರೀಮಂತರಾಗಲು ಸಾಧ್ಯ. ಪ್ರತಿಯೊಂದು ಸಮಸ್ಯೆಗೂ ಉತ್ತರ ಇದೆ. ಮನುಷ್ಯ ಮಾಡಿಕೊಂಡ ಸ್ವಯಂಕೃತ ಅಪರಾಧಗಳಿಗೆ ಉತ್ತರ ಸಿಗಲ್ಲ. ದೇವರ ಅದ್ಭುತ ಕೊಡುಗೆ ಮನುಷ್ಯ. ಅವನು ಪ್ರತಿಯೊಬ್ಬ ರಿಗೂ ಬದುಕಲು ಅವಕಾಶ ನೀಡಿದ್ದಾನೆ. ಮನುಷ್ಯ ಸಹನೆ, ಸಂಗಮದಿಂದ ಹಾಗೂ ಸದಾ ಎಚ್ಚರದಿಂದ ಇರಬೇಕು. ಹಿಟ್ಲರ್ ಸಸ್ಯಾಹಾರಿಯಾಗಿದ್ದರೂ ಭಾವನೆಯಿಂದ ಕ್ರೂರಿಯಾಗಿದ್ದನು. ಆದರೆ ಮದರ್ ಥೇರಸಾ ಮಾಂಸಾಹಾರಿಯಾಗಿದ್ದರೂ ಕರುಣಾಮಯಿಯಾಗಿದ್ದು, ಕುಷ್ಟರೋಗಿಗಳ ಸೇವೆ ಮಾಡಿದರು. ಮನುಷ್ಯ ಮಂದಿ ತಲೆಗೆ ಕಸ ಹಾಕುವ ಕೆಲಸ ಮಾಡದೇ, ಬದುಕಿಗೆ ಬೆಳಕನ್ನು ಕೊಡಬೇಕು. ಮಕ್ಕಳಾಗುವುದು ದೇವರ ಕೃಪೆಯಾಗಿರದೆ ಪ್ರಕೃತಿಯ ಸಹಜ ಪ್ರಕ್ರಿಯೆ.

ಭಾರತ ದೇಶದ ಗುರು ಪರಂಪರೆ ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದುದು. ದೇಶದಲ್ಲಿಯೇ ಕರ್ನಾಟಕ ಶ್ರೇಷ್ಠ ರಾಜ್ಯ. ನಮ್ಮಲ್ಲಿ ಮಠಗಳ ಕೊಡುಗೆ ಅಪಾರವಾಗಿದ್ದು ಇಲ್ಲಿನ ಮಠಾಧಿಪತಿಗಳು ಭಕ್ತರನ್ನು ದೇವರನ್ನಾಗಿ ನೋಡಿದರು. ಕೆಲವು ದಶಕಗಳ ಹಿಂದೆ ಮಕ್ಕಳಿಗೆ ಮಠಗಳಲ್ಲಿ ಪ್ರಸಾದ ನೀಡಿ ಶಿಕ್ಷಣ ಕೊಡಿಸಿದರು. ಪಾಟೀಲ ಪುಟ್ಟಪ್ಪ, ಕವಿ ಶಾಂತರಸರು ಮುಂತಾದ ಮಹನೀಯರುಗಳ ಶ್ರೇಯೋಭಿವೃದ್ಧಿ ಯಲ್ಲಿ ಮಠಗಳ ಪಾತ್ರ ಮಹತ್ವದ್ದಾಗಿದೆ. 

error: Content is protected !!