ಜಾಹೀರಾತು ಪ್ರಸಾರಕ್ಕೆ ಪೂರ್ವಾನುಮತಿ ಕಡ್ಡಾಯ

ಮುದ್ರಣ ಮಾಲೀಕರು, ಲೋಕಲ್ ಕೇಬಲ್‌ ಟಿವಿ ಆಪರೇಟರ್‌ಗಳ ಸಭೆಯಲ್ಲಿ ಡಿಸಿ

ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳು ಮುದ್ರಿಸಿದ ಪ್ರತಿಗಳ ಸಂಖ್ಯೆ ರಿಜಿಸ್ಟರ್‌ನಲ್ಲಿ ನಮೂದಿಸಲು ಮುದ್ರಣಾಲಯ ಮಾಲೀಕರಿಗೆ ಸೂಚನೆ

ದಾವಣಗೆರೆ, ಏ.1 – ವಿಧಾನಸಭಾ  ಚುನಾವಣೆ  ಪ್ರಚಾರ ಸಾಮಗ್ರಿ ಹಾಗೂ ಕೇಬಲ್ ಟಿ.ವಿ ಸೇರಿದಂತೆ ವಿದ್ಯುನ್ಮಾನ ಮಾಧ್ಯಮಗಳ ಜಾಹೀರಾತುಗಳ ಪ್ರಸಾರಕ್ಕೆ ಮುನ್ನ ಪೂರ್ವನುಮತಿ ಕಡ್ಡಾಯ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಮುದ್ರಣಾಲಯದ ಮಾಲೀಕರು ಹಾಗೂ ಲೋಕಲ್ ಕೇಬಲ್ ಟಿವಿ ಆಪರೇಟರ್‍ಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆಯನ್ನು ಎಲ್ಲರೂ ಪಾಲಿಸಬೇಕು. ಯಾವುದೇ ರಾಜಕೀಯ ಪಕ್ಷದವರು, ಅಭ್ಯರ್ಥಿಗಳು ಮುದ್ರಿಸಿದ ಪ್ರತಿಗಳ ಸಂಖ್ಯೆಯನ್ನು ರಿಜಿಸ್ಟರ್‍ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದರು.

ಮುದ್ರಣಕ್ಕೆ ಆದೇಶ ನೀಡಿದ ವ್ಯಕ್ತಿಯಿಂದ ಕಡ್ಡಾಯವಾಗಿ ಒಂದು ಘೋಷಣೆಯನ್ನು ದ್ವಿಪ್ರತಿಯಲ್ಲಿ ಪಡೆದುಕೊಳ್ಳಬೇಕು.  ಘೋಷಣೆಗೆ ಇಬ್ಬರು ಸಾಕ್ಷಿದಾರರ ರುಜು ಪಡೆದುಕೊಳ್ಳಬೇಕು. ಮುದ್ರಣ ಮಾಡಿದ ಎರಡು ದಿನದೊಳಗಾಗಿ ಘೋಷಣೆ ಮತ್ತು ಮುದ್ರಿಸಿದ ಪ್ರಚಾರ ಸಾಮಗ್ರಿಯ ಒಂದು ಪ್ರತಿಯೊಂದಿಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಚುನಾವಣಾ ಕರ್ತವ್ಯ ನಿರತ ಯಾವುದೇ ಅಧಿಕಾರಿ ಮಾಹಿತಿ ಕೇಳಿದಾಗ ತಕ್ಷಣ ನೀಡಬೇಕು ಎಂದರು.

ಸ್ಥಳೀಯ ಕೇಬಲ್ ಆಪರೇಟರ್‍ಗಳು ಯಾವುದೇ ಪಕ್ಷ ಹಾಗೂ ಅಭ್ಯರ್ಥಿಯು ಜಾಹೀರಾತಿನಲ್ಲಿ ಬಳಸಲಾಗಿರುವ ವಿವರ (ಕಂಟೆಂಟ್) ಜಿಲ್ಲಾ ಮಟ್ಟದ ಎಂ.ಸಿ.ಎಂ.ಸಿ. ಕಮಿಟಿಯಿಂದ ಪೂರ್ವಾನುಮತಿ ಕಡ್ಡಾಯವಾಗಿ ಪಡೆದಿರಬೇಕು.  ಎಲ್ಲ ಸ್ಥಳೀಯ ಕೇಬಲ್ ಆಪರೇಟರ್‍ಗಳು ತಮ್ಮ ವಾಹಿನಿ, ಚಾನಲ್, ಕೇಬಲ್ ನೆಟ್‍ವರ್ಕ್‍ನಲ್ಲಿ ಬಿತ್ತರಿಸಿದ ಎಲ್ಲ ಜಾಹೀರಾತುಗಳ ಮಾಹಿತಿ ಮತ್ತು ಅದಕ್ಕೆ ವಿಧಿಸಲಾಗಿರುವ ವೆಚ್ಚದ ವಿವರವನ್ನು ಕಡ್ಡಾಯವಾಗಿ ಜಿಲ್ಲಾ ಚುನಾವಣಾಧಿಕಾರಿಗಳ ಹಾಗೂ ಆಯಾ ತಾಲ್ಲೂಕಿನ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಗಮನಕ್ಕೆ ಕಡ್ಡಾಯವಾಗಿ ತರಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ನಜ್ಮಾ ಉಪಸ್ಥಿತರಿದ್ದರು.

error: Content is protected !!