ಹರಿಹರ, ಮಾ. 27 – ಹರಿಹರ ಕ್ಷೇತ್ರದ ಶಾಸಕ ಎಸ್. ರಾಮಪ್ಪ ತಮ್ಮ ಐದು ವರ್ಷದ ಅವಧಿಯಲ್ಲಿ ಲಂಚ ಪಡೆಯುವುದೇ ರೂಢಿ ಮಾಡಿಕೊಂಡ ಪರಿಣಾಮವಾಗಿ ಕೊನೆಯಲ್ಲಿ ದೃಶ್ಯ ವಾಹಿನಿಯೊಂದರ ಕುಟುಕು ಕಾರ್ಯಾಚರಣೆಯಲ್ಲಿ ಆಧಾರ ಸಹಿತ ಸಿಕ್ಕು ಹಾಕಿಕೊಂಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಹನಗವಾಡಿ ವೀರೇಶ್ ಹೇಳಿದ್ದಾರೆ.
ಬಿಜೆಪಿ ಪಕ್ಷದ ನಾಯಕರಿಗೆ ಹಗುರವಾದ ಮಾತುಗಳನ್ನಾಡುವ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಹೇಳಿಕೆ ನೀಡಬೇಕು ಎಂದು ಜನ ನಿರೀಕ್ಷಿಸಿದ್ದಾರೆ ಎಂದು ವೀರೇಶ್ ಹೇಳಿದರು.
ನಗರದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಾಸಕ ರಾಮಪ್ಪ ತಮ್ಮ ಐದು ವರ್ಷಗಳ ಅವಧಿಯಲ್ಲಿ ಮತದಾರರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯವನ್ನು ಮಾಡದೇ ಕೇವಲ ಹಣ ಗಳಿಸುವುದರಲ್ಲೇ ಕಾಲಹರಣ ಮಾಡುತ್ತಾ ಬಂದಿದ್ದರು ಎಂದು ಆರೋಪಿಸಿದರು.
ಅವರ ಕೈಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಕ್ಕೆ ಆಗದೇ ಬಿಜೆಪಿ ಸರ್ಕಾರ ನನಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ಸಬೂಬು ಹೇಳುತ್ತಿದ್ದರು ಎಂದು ಟೀಕಿಸಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಅವರು ತಾಲ್ಲೂಕಿನ ಅಭಿವೃದ್ಧಿಗೆ ಕೇಂದ್ರದಿಂದ ವಿಶೇಷ ಅನುದಾನವನ್ನು ತಂದಿದ್ದರಿಂದ ಅನೇಕ ಗ್ರಾಮಗಳಲ್ಲಿ ರಸ್ತೆ, ಚರಂಡಿ ಸೇತುವೆ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ಆಗಿವೆ. ಇಲ್ಲದೆ ಹೋಗಿದ್ದರೆ ಇಂತ ನಿಷ್ಕ್ರಿಯ ಶಾಸಕರಿಂದ ಕ್ಷೇತ್ರ ಅಭಿವೃದ್ಧಿ ಕಾಣುತ್ತಿರಲಿಲ್ಲ ಎಂದರು.