ಜಾಮೀನು ಕೋರಿ ಮಾಡಾಳು ವಿರೂಪಾಕ್ಷಪ್ಪ ಸಲ್ಲಿಸಿದ್ದ ಅರ್ಜಿ ವಜಾ ಗೊಳಿಸಿದ ಹೈ ಕೋರ್ಟ್
ತೀರ್ಪು ಹೊರ ಬೀಳುತ್ತಿದ್ದಂತೆ ಲೋಕಾಯುಕ್ತ ಪೊಲೀಸರಿಂದ ಶಾಸಕರ ಶೋಧ ಕಾರ್ಯ
ಬೆಂಗಳೂರಿನ ಕಡೆ ತೆರಳುತ್ತಿದ್ದಾಗ ಬಂಧನ
ಬೆಂಗಳೂರು, ಮಾ. 27 – ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್) ಟೆಂಡರ್ ಲಂಚ ಪ್ರಕರಣ ಎದುರಿಸುತ್ತಿರುವ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಂಧಿಸಲಾಗಿದೆ.
ಲೋಕಾಯುಕ್ತ ಪೊಲೀಸರು ಸೋಮವಾರ ರಾತ್ರಿ ಅವರನ್ನು ತುಮಕೂರಿನ ಕ್ಯಾತ್ಸಂದ್ರ ಟೋಲ್ ಗೇಟ್ ಬಳಿ ಬಂಧಿಸಿದ್ದಾರೆ.
ಕಳೆದ ಮಾರ್ಚ್ 2ರಂದು ವಿರೂಪಾಕ್ಷಪ್ಪ ಅವರ ಮಗ ಮಾಡಾಳ್ ಪ್ರಶಾಂತ್ ಲಂಚ ಪಡೆಯುವಾಗ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿದ್ದ ವಿರೂಪಾಕ್ಷಪ್ಪಗೆ ಹೈಕೋರ್ಟ್‌ನ ಏಕಸದಸ್ಯ ಪೀಠ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿತ್ತು. ನಂತರ ಶಾಸಕರು ಜಾಮೀನು ಕೋರಿ ಸಲ್ಲಿಸಿದ್ದ ಮುಖ್ಯ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.
ಹೈಕೋರ್ಟ್ ತೀರ್ಪು ಹೊರ ಬಿದ್ದ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ಶಾಸಕರ ಶೋಧ ಕಾರ್ಯ ಆರಂಭಿಸಿದ್ದರು. ನಂತರ ಬೆಂಗಳೂರಿನ ಕಡೆಗೆ ತೆರಳುತ್ತಿದ್ದ ಶಾಸಕರನ್ನು ಬಂಧಿಸಲಾಗಿದೆ.
ಬಂಧನದ ನಂತರ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಆರೋಗ್ಯ ತಪಾಸಣೆ ಮಾಡಲಾಗಿದೆ.
ಇದಕ್ಕೂ ಮುಂಚೆ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್‌ನ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಕೆ. ನಟರಾಜನ್ ವಜಾಗೊಳಿಸಿದ್ದರು.
ಮಧ್ಯಂತರ ಆದೇಶ ನೀಡುವ ಸಂದರ್ಭದಲ್ಲಿ ಪ್ರಾಸಿಕ್ಯೂಷನ್ ಬಳಿ ಆರೋಪಿ ವಿರೂಪಾಕ್ಷಪ್ಪ ವಿರುದ್ಧ ಯಾವುದೇ ಸಾಕ್ಷ್ಯ ಇರಲಿಲ್ಲ. ಆದರೆ, ಸೂಕ್ತ ಸಾಕ್ಷ್ಯಗಳನ್ನು ಸಂಗ್ರಹಿಸಬೇಕಾದರೆ ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುವ ಅವಶ್ಯಕತೆ ಇದೆ ಎಂಬುದನ್ನು ಪ್ರಾಸಿಕ್ಯೂಷನ್ ವಿಚಾರಣೆ ವೇಳೆ ನ್ಯಾಯಪೀಠಕ್ಕೆ ಮನದಟ್ಟು ಮಾಡಿಕೊಟ್ಟಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ವಿರೂಪಾಕ್ಷಪ್ಪ ಅವರು ಲಂಚಕ್ಕೆ ಬೇಡಿಕೆ ಇರಿಸಿದ್ದರು ಮತ್ತು ಈ ಲಂಚದ ಹಣ ಪಡೆಯುವಲ್ಲಿ ಅವರ ಪುತ್ರ ಪ್ರಶಾಂತ್ ಪಾತ್ರ ವಹಿಸಿದ್ದಾರೆ ಎಂಬುದನ್ನು ಮನವರಿಕೆ ಮಾಡಿದೆ. ಹಾಗಾಗಿ, ಆರೋಪಿಯನ್ನು ಬಂಧಿಸಿಯೇ ವಿಚಾರಣೆ ನಡೆಸುವ ಅಗತ್ಯವಿದೆ ನ್ಯಾಯಾಲಯ ಹೇಳಿದೆ.
ಲೋಕಾಯುಕ್ತ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಮತ್ತು ಬಿ.ಬಿ.ಪಾಟೀಲ್ ವಾದ ಮಂಡಿಸಿದ್ದರು.
ಲಂಚ ಪ್ರಕರಣದಲ್ಲಿ ಸಿಲುಕಿದ್ದ ಶಾಸಕರ ಕಚೇರಿ ಹಾಗೂ ಮನೆಗಳಲ್ಲಿ ಶೋಧ ನಡೆಸಿದ ಲೋಕಾಯುಕ್ತರಿಗೆ 8.12 ಕೋಟಿ ರೂ.ಗಳ ನಗದು ದೊರೆತಿತ್ತು.
ಶಾಸಕ ಮಾಡಾಳ್‌ಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಲೋಕಾಯುಕ್ತರು ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಶಾಸಕರಿಗೆ ನೋಟಿಸ್ ಕಳಿಸಿತ್ತು. ಈ ಬೆನ್ನಲ್ಲೇ ಅವರ ಬಂಧನವಾಗಿದೆ.
ಶಾಸಕರಿಗೆ ಹೈಕೋರ್ಟ್‌ನ ಏಕ ಸದಸ್ಯ ಪೀಠ ತ್ವರಿತ ವಿಚಾರಣೆ ಮೂಲಕ ಜಾಮೀನು ಮಂಜೂರು ಮಾಡಿದ್ದಕ್ಕೆ ಬೆಂಗಳೂರು ವಕೀಲರ ಸಂಘ ತೀವ್ರ ಆಘಾತ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು. ಈ ಬಗ್ಗೆ ಸಂಘವು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಗೆ ಪತ್ರವೊಂದನ್ನೂ ಬರೆದಿತ್ತು.
ಲಂಚ ಪ್ರಕರಣ ಬೆಳಕಿಗೆ ಬಂದ ನಂತರ ಮಾಡಾಳ್ ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಬಂಧನವಾಗಿರುವ ಹಿನ್ನೆಲೆಯಲ್ಲಿ, ಚುನಾವಣಾ ಸಮಯದಲ್ಲೇ ಬಿಜೆಪಿಗೆ ಮತ್ತೊಂದು ಮುಜುಗರ ಎದುರಾಗಿದೆ. ಶಾಸಕರ ವಿರುದ್ಧ ಪಕ್ಷ ಮತ್ತಷ್ಟು ಕ್ರಮ ತೆಗೆದುಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.