ಬೆಂಗಳೂರು, ಮಾ. 24 – 3 ದಶಕಗಳ ಮೊದಲ ಹಂತದ ಹೋರಾಟ ಇಂದು ಯಶಸ್ಸು ಕಂಡಿದೆ, ಪಂಚಮಸಾಲಿ ಸಮುದಾಯದ ಪ್ರತಿಯೊಬ್ಬರಿಗೂ ಮೀಸಲಾತಿಯ ಲಾಭ ದೊರಕಿಸಿಕೊಡುವ ಎರಡನೇ ಹಂತದ ಹೋರಾಟಕ್ಕೆ ಹರಿಹರ ಪೀಠ ಅಣಿಯಾಗಿದೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷರಾದ ಶ್ರೀ ವಚನಾನಂದ ಸ್ವಾಮೀಜಿ ಪ್ರತಿಕ್ರಿಯಿಸಿದರು. ಇಂದು ರಾಜ್ಯ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿಯ ಮೂಲಕ ಶೇ. 7 ರಷ್ಟು ಪ್ರಾತಿನಿಧ್ಯ ನೀಡುವ ಸ್ಪಷ್ಟ ನಿರ್ಧಾರದ ಘೋಷಣೆಯ ನಂತರ ಮಾಧ್ಯಮಗಳಿಗೆ ಈ ಪ್ರತಿಕ್ರಿಯೆ ನೀಡಿದರು.
ಹರಿಹರ ಪಂಚಮಸಾಲಿ ಪೀಠ ಸಮುದಾಯಕ್ಕೆ ಮೀಸಲಾತಿಯನ್ನು ದೊರಕಿಸಿಕೊಡುವ ಪ್ರಾಥಮಿಕ ಗುರಿಯ ಹಿನ್ನೆಲೆಯಲ್ಲಿ ಸ್ಥಾಪಿಸಲಾದ ಪೀಠವಾಗಿದೆ. ಈ ಪೀಠದ ಪೀಠಾಧ್ಯಕ್ಷರಾದ ನಂತರ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದೆವು. ಈ ಹೋರಾಟವನ್ನು ಸೂಕ್ತ ರೀತಿಯಲ್ಲಿ ಮುನ್ನಡೆಸುವ ಮೂಲಕ ಆಯೋಗಕ್ಕೆ ಸೂಕ್ತ ದಾಖಲಾತಿಯನ್ನು ಸಲ್ಲಿಸಿದ್ದೆವು. ಸೂಕ್ತ ದಾಖಲಾತಿ ಹಾಗೂ ಸಮರ್ಪಕವಾದ ವಾದದ ಪರಿಣಾಮವಾಗಿ ಹಿಂದುಳಿದ ಆಯೋಗ ಮಧ್ಯಂತರ ವರದಿಯನ್ನು ನೀಡಿದೆ. ಈ ವರದಿಯ ಅನ್ವಯ ಹಾಗೂ ರಾಷ್ಟ್ರೀಯ ನಾಯಕರೊಂದಿಗಿನ ಚರ್ಚೆ ಫಲ ನೀಡಿದ್ದು, ಇಂದು ಮೀಸಲಾತಿಯ ಸ್ಪಷ್ಟ ಚಿತ್ರಣ ದೊರೆತಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ನಮ್ಮ ಸಮುದಾಯಕ್ಕೆ ಶೈಕ್ಷಣಿಕ ಹಾಗೂ ಸಾಮಾಜಿಕ ಮತ್ತು ಉದ್ಯೋಗದಲ್ಲಿ ಮೀಸಲಾತಿ ದೊರೆಯುವುದು ಅಗತ್ಯವಿತ್ತು. ಅದು ಇಂದು ಈಡೇರಿದೆ. ಆದರೆ, ಅದು ಅನುಷ್ಠಾನಗೊಂಡು ನಮ್ಮ ಸಮುದಾಯದ ಎಲ್ಲರಿಗೂ ಅದರ ಸದುಪಯೋಗ ಆಗಬೇಕು. ಈ ನಿಟ್ಟಿನಲ್ಲಿ ನಾವು ಕಾನೂನಾತ್ಮಕವಾಗಿ ಹಾಗೂ ಸಂವಿಧಾನಾತ್ಮಕವಾಗಿ ಎರಡನೇ ಹಂತದ ಹೋರಾಟದಲ್ಲಿ ತೊಡಗಿಕೊಳ್ಳುತ್ತೇವೆ. ಎಲ್ಲರಿಗೂ ಮೀಸಲಾತಿಯ ಲಾಭ ದೊರಕಿಸಿಕೊಡುವವರೆಗೂ ವಿಶ್ರಮಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಕೇಂದ್ರ ಓಬಿಸಿಯ ಪಟ್ಟಿನಲ್ಲಿ ಪಂಚಮಸಾಲಿಗಳನ್ನು ಸೇರಿಸಬೇಕು ಎನ್ನುವ ಪ್ರಸ್ತಾಪ ಮುಖ್ಯ ಕಾರ್ಯ ದರ್ಶಿಗಳ ಮುಂದಿದೆ. ಕೇಂದ್ರ ಸರ್ಕಾರ ನಮ್ಮ ಮನವಿಯನ್ನು ಇಲ್ಲಿಗೆ ವರ್ಗಾಯಿಸಿದ್ದು ಅದರ ಬಗ್ಗೆಯೂ ನಿರಂತರ ಹೋರಾಟ ನಡೆಯಲಿದೆ ಎಂದು ಹೇಳಿದರು.