ಬಿಜೆಪಿಯಿಂದ ದ್ವೇಷದ ರಾಜಕಾರಣ: ಕಿಡಿ

ದಾವಣಗೆರೆ, ಮಾ.24- ಬಿಜೆಪಿ ನಾಯಕರು ದ್ವೇಷದ ರಾಜಕಾರಣ ಮಾಡುತ್ತಿದ್ದು, ಕಾಂಗ್ರೆಸ್‌ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರನ್ನು ಎದೆಗುಂದಿಸುವ ನಿಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹೆಚ್‌.ಬಿ ಮಂಜಪ್ಪ ಆರೋಪಿಸಿದರು.

ಇಂದಿಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಾವಿರಾರು ಕೋಟಿ ಹಣವನ್ನು ಬ್ಯಾಂಕಿನಲ್ಲಿ ಸಾಲ ಪಡೆದು ದೇಶ ಬಿಟ್ಟು ಹೋಗಿರುವ ನೀರವ್‌ ಮೋದಿಯಂತಹವರನ್ನು ಉದಾಹಣೆ ನೀಡಿ, ಮೋದಿ ಎಂಬ ಉಪನಾಮ ಹೊಂದಿರುವ ಅನೇಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಯಾಕೆ? ಎಂದು ಪ್ರಶ್ನಿಸಿದ್ದ ರಾಹುಲ್‌ ಗಾಂಧಿಯವರ ಹೇಳಿಕೆಯನ್ನು ಸಾರ್ವಜನಿಕ ವ್ಯಕ್ತಿಯಿಂದ ಅರ್ಜಿ ಸಲ್ಲಿಸಿ, ಬಿಜೆಪಿ ಆಡಳಿತವಿರುವ ಸುರತ್ಕಲ್‌ನಲ್ಲಿ ನ್ಯಾಯಾಂ ಗದ ಮೇಲೆ ಒತ್ತಡ ತಂದು ನ್ಯಾಯಾಲ ಯದಿಂದ 2 ವರ್ಷ ಶಿಕ್ಷೆ ವಿಧಿಸುವ ತೀರ್ಪು ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ನ್ಯಾಯಾಂಗ ವ್ಯವಸ್ಥೆ ಬಿಜೆಪಿಗರ ಸ್ವತ್ತಲ್ಲ. ಕಾಂಗ್ರೆಸ್‌ ರಾಷ್ಟ್ರೀಯ ನಾಯಕರು ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಲು ಸಿದ್ದತೆ ನಡೆಸಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ರಾಹುಲ್‌ ಗಾಂಧಿಯವರಿಗೆ ನ್ಯಾಯ ಸಿಗುತ್ತದೆಂಬ ವಿಶ್ವಾಸವಿದೆ ಎಂದರು.

ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ಯಾತ್ರೆ ಕಾರ್ಯಕ್ರಮ ಹಾಗೂ ಆಡಳಿತ ಪಕ್ಷದ ಜನ ವಿರೋಧಿ ನೀತಿಗಳ ವಿರುದ್ಧ ಕೈಗೊಂಡ ಸಂಘಟನಾತ್ಮಕ ಹೋರಾಟಗಳನ್ನು ಹತ್ತಿಕ್ಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇಂತಹ ದ್ವೇಷದ ರಾಜಕಾರಣವನ್ನು ಬಿಜೆಪಿಯ ನಾಯಕರು ಕೈ ಬಿಡಬೇಕೆಂದರು.

error: Content is protected !!