ದಾವಣಗೆರೆ, ಮಾ. 23- ಜಿಲ್ಲೆಗೆ ಮೋದಿ ಆಗಮಿಸುವ ಬೆನ್ನಲ್ಲೇ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ಪಾಲಿಕೆ ಮುಂಭಾಗದಲ್ಲಿ ಪಾಲಿಕೆ ಹೊರಗುತ್ತಿಗೆ ನೌಕರರು ನಡೆಸುತ್ತಿರುವ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿ ರುವ ಇತರೆ ಸಿಬ್ಬಂದಿಗಳು ಯುಗಾದಿಯ ಸಂಭ್ರಮದಲ್ಲಿ ದ್ದರೆ. ಇತ್ತ ಪಾಲಿಕೆ ಹೊರಗುತ್ತಿಗೆ ನೌಕರರಾದ ವಾಹನ ಚಾಲಕರು, ನೀರು ಸರಬರಾಜು ಸಹಾಯಕರು, ಲೋಡರ್ಸ್, ಕ್ಲೀನರ್ಸ್, ಹೆಲ್ಪರ್ಸ್ ಡಾಟಾ ಎಂಟ್ರಿ ಆಪರೇಟರ್‌ಗಳು ಹಾಗೂ ಸ್ಯಾನಿಟರಿ ಸೂಪರ್ ವೈಸರ್‌ಗಳು ಯುಗಾದಿ ಸಂಭ್ರಮ, ಸಡಗರ, ಕುಟುಂಬ ಎಲ್ಲವನ್ನು ತ್ಯಜಿಸಿ ನೇರ ಪಾವತಿಗೆ ಆಗ್ರಹಿಸಿ ಮುಷ್ಕರದಲ್ಲಿ ನಿರತರಾಗಿದ್ದಾರೆ.
ಪಾಲಿಕೆಯಲ್ಲಿ ಕಾರ್ಯನಿರ್ವಹಿಸುವ 350ಕ್ಕೂ ಅಧಿಕ ಹೊರಗುತ್ತಿಗೆ ನೌಕರರು ಸೇವೆ ಸ್ಥಗಿತಗೊಳಿಸಿ, ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರು ಬೆಂಬಲ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ನಾಳೆ ಶುಕ್ರವಾರ ಸಂಜೆ ವೇಳೆಗೆ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ನಾಯಕರು ಹಾಗೂ ಪ್ರತಿ ಜಿಲ್ಲೆಯಿಂದಲೂ 10 ರಿಂದ 15 ಜನರು ಜಿಲ್ಲೆಗೆ ಆಗಮಿಸಲಿದ್ದಾರೆ. ನಾಳೆ ನಡೆಯುವ ವಿಜಯ ಸಂಕಲ್ಪ ಸಮಾವೇಶಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿದ್ದು, ಹೊರಗುತ್ತಿಗೆ ನೌಕರರ ಬೇಡಿಕೆ ಈಡೇರಿಕೆಗಾಗಿ ಗಮನ ಸೆಳೆಯುವ ಹೋರಾಟ ರೂಪಿಸಲಾಗುತ್ತಿದೆ.
– ದುಗ್ಗೇಶ್ ಎಂ.ಆರ್., ಜಿಲ್ಲಾಧ್ಯಕ್ಷ, ಪಾಲಿಕೆ ಹೊರಗುತ್ತಿಗೆ ನೌಕರರ ಸಂಘ, ದಾವಣಗೆರೆ
ಪ್ರಧಾನ ಮಂತ್ರಿ ಆಗಮನದ ಹಿನ್ನೆಲೆ, ಪಾಲಿಕೆಯ 350 ಖಾಯಂ ನೌಕರರು ಸ್ವಚ್ಚತಾ ಕಾರ್ಯದಲ್ಲಿ ಎಂದಿನಂತೆ ತೊಡಗಿಸಿಕೊಂಡಿದ್ದು. ಹೊರಗುತ್ತಿಗೆ ನೌಕರರು ನಡೆಸುತ್ತಿರುವ ಮುಷ್ಕರದಿಂದ ನಗರದ ಸ್ವಚ್ಚತಾ ಕಾರ್ಯಕ್ಕೆ ಯಾವುದೇ ಅಡ್ಡಿಯುಂಟಾಗಿಲ್ಲ. ವಾಹನ ಚಾಲಕ ಹೊರಗುತ್ತಿಗೆದಾರರಿಗೆ ಬೇರೆ ಸಿಬ್ಬಂದಿ ಒದಗಿಸುವಂತೆ ನೋಟಿಸ್ ನೀಡಲಾಗಿದ್ದು, ಕೆಲಸಕ್ಕೆ ಅಡ್ಡಿಯಾಗದಂತೆ ಸಿಬ್ಬಂದಿ ಒದಗಿಸುವುದು ಗುತ್ತಿಗೆದಾರರ ಜವಾಬ್ದಾರಿಯಾಗಿದೆ.
– ರೇಣುಕಾ, ಆಯುಕ್ತರು, ಮಹಾನಗರ ಪಾಲಿಕೆ, ದಾವಣಗೆರೆ
ನಗರದ ಸ್ವಚ್ಛತೆ ಹಾಗೂ ಕುಡಿಯುವ ನೀರು ನಿರ್ವಹಣೆಯಲ್ಲಿ ಹೊರಗುತ್ತಿಗೆ ನೌಕರರ ಪಾತ್ರ ಮಹತ್ವದ್ದಾಗಿದೆ. 2017ರಲ್ಲಿ ಪೌರ ಕಾರ್ಮಿಕರ ನೇಮಕಾತಿ ನಡೆದ ಸಂದರ್ಭದಲ್ಲೂ ಕೂಡ ಹೊರಗುತ್ತಿಗೆ ನೌಕರರನ್ನು ಗುತ್ತಿಗೆ ಪದ್ಧತಿಯಲ್ಲೇ ಉಳಿಸಲಾಯಿತು. ಈಗಲೂ ಸಹ ಹೊರಗುತ್ತಿಗೆ ನೌಕರರನ್ನು ಗುತ್ತಿಗೆ ಪದ್ಧತಿಯಲ್ಲಿ ಮುಂದುವರೆಸುವ ಸರ್ಕಾರದ ನೀತಿ ಮಲತಾಯಿ ಧೋರಣೆ ಅನುಸರಿಸುತ್ತಿರುವಂತಿದೆ ಎಂಬುದು ಮುಷ್ಕರ ನಿರತರ ವಾದ.
ಪೌರ ಕಾರ್ಮಿಕರ ನೇರ ನೇಮಕಾತಿಯನ್ನು ಸ್ವಾಗತಿಸಿರುವ ಹೊರಗುತ್ತಿಗೆ ನೌಕರ ವರ್ಗ. ಒಂದೇ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರ ಮಧ್ಯೆ ಒಡೆದಾಳುವ ನೀತಿ ಅನುಸರಿಸುವುದು ಸರ್ಕಾರಕ್ಕೆ ಶೋಭೆಯಲ್ಲ. ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರನ್ನು ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ಪಾವತಿಗೆ ಒಳಪಡಿಸಿ, ಹಂತ ಹಂತವಾಗಿ ಖಾಯಂಗೊಳಿಸಬೇಕೆಂಬ ಆಗ್ರಹ ಮಾಡುತ್ತಿದೆ.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಖಾಯಂ ಮಾಡಲು ಮುಂದಾಗಿರುವ ಸರ್ಕಾರ, ಪೌರಕಾರ್ಮಿಕರೊಟ್ಟಿಗೆ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ 15 ಸಾವಿರಕ್ಕೂ ಅಧಿಕ ನೌಕರರನ್ನು ಗುತ್ತಿಗೆ ಪದ್ಧತಿಯಲ್ಲಿ ಉಳಿಸಿ. ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುವ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಮುಷ್ಕರ ನಿರತರು ಒಕ್ಕೊರಲ ದನಿಯಲ್ಲಿ ದೂರುತ್ತಿದ್ದು, ಈಗಾಗಲೇ ಸರ್ಕಾರ ಎರಡು ಬಾರಿ ನೀಡಿದ್ದ ಭರವಸೆ ಹುಸಿಯಾಗಿದ್ದು, ಈ ಬಾರಿ ಬೇಡಿಕೆ ಈಡೇರುವ ತನಕ ಮುಷ್ಕರ ಹಿಂಪಡೆಯಲ್ಲ ಎನ್ನುತ್ತಿದ್ದಾರೆ.