ದಾವಣಗೆರೆ, ಮಾ. 23- ವನಿತಾ ಸಮಾಜದ ಅಂಗ ಸಂಸ್ಥೆಯಾದ ಭೂಮಿಕಾ-ವನಿತಾ ರಂಗ ವೇದಿಕೆಯ 20 ನೇ ವಾರ್ಷಿಕೋತ್ಸವ ಮತ್ತು ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನಾಳೆ ದಿನಾಂಕ 24 ರ ಶುಕ್ರವಾರ ಸಂಜೆ 6.30 ಕ್ಕೆ ನಗರದ ಲಲಿತಕಲಾ ಮಹಾವಿದ್ಯಾಲಯ (ಸ್ಕೂಲ್ ಆಫ್ ಆರ್ಟ್ಸ್)ದ ಸಭಾಂಗಣದಲ್ಲಿ ಜಂಗಮ ಕಲೆಕ್ಟಿವ್ ಅರ್ಪಿಸುವ, ಲಕ್ಷ್ಮಣ ಕೆ.ಪಿ. ನಿರ್ದೇಶನದ ಹಾಗೂ ಕೆ.ಬಿ.ಸಿದ್ದಯ್ಯನವರ ಆಯ್ದ ಬರಹಗಳ ಆಧರಿಸಿದ ದಕ್ಲಕಥಾ ದೇವಿಕಾವ್ಯ ಪ್ರಾಯೋಗಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿದ್ದು, ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷರಾದ ಡಾ.ಪಿ.ಎಂ ಅನುರಾಧ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಂಗಮ ಕಲೆಕ್ಟಿವ್ ಚಲನೆ ಮತ್ತು ರೂಪಾಂತರ ತತ್ವಗಳಲ್ಲಿ ನಂಬಿಕೆ ಇರುವ ವಿಭಿನ್ನ ಹಿನ್ನೆಲೆಯ ಕಲಾವಿದರ ಸಮೂಹ, ಸಾಂಸ್ಕೃತಿಕ ಜಾಗೃತಿ ಮೂಡಿಸುವ ಸಲುವಾಗಿ ರಂಗಭೂಮಿಯನ್ನು ತನ್ನ ಅಭಿವ್ಯಕ್ತಿಯ ವರ್ಗವನ್ನಾಗಿ ಮಾಡಿಕೊಂ ಡಿದೆ. ಶಿಕ್ಷಣ, ಸಾಹಿತ್ಯ ಪ್ರಕಾಶನ, ಸಿನಿಮಾ ಮತ್ತು ಸಾಮಾಜಿಕ ಹೋರಾಟಗಳಂತಹ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಂಡು, ಸುತ್ತಲಿನ ಜನ ಸಮುದಾಯಗಳ ಬದುಕಿನ ಜೊತೆಗೆ ಬೆರೆತು ಹೋಗುವುದು ಜಂಗಮದ ಮುಖ್ಯ ತುಡಿತವಾಗಿದೆ ಎಂದರು.
ದಕ್ಲಕಥಾ ದೇವಿಕಾವ್ಯ-ನಾಟಕ : ದಕ್ಲಕಥಾ ದೇವಿಕಾವ್ಯ ಕನ್ನಡದ ಮಹತ್ವದ ಬರಹಗಾರರು ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕ ಸದಸ್ಯರಾದ ಕೆ.ಬಿ.ಸಿದ್ದಯ್ಯ ಅವರ ಖಂಡಕಾವ್ಯ ಮತ್ತು ಕಥನಗಳನ್ನು ಒಟ್ಟಿಗೆ ಹೊಸೆದು ಕಟ್ಟಿರುವ ರಂಗಪ್ರಯೋಗವಾಗಿದೆ. ತಳಾತಿತಳ ಸಮುದಾಯಗಳ ಕಲ್ಪನೆಯಲ್ಲಿ ಅರಳಿರುವ ಭೂಮಿ ಹುಟ್ಟಿದ, ಜೀವ ಹುಟ್ಟಿದ ಕಥನದಿಂದ ಆರಂಭವಾಗುವ ಈ ಪ್ರಯೋಗ, ತಳಾತಿತಳ ಸಮುದಾಯಗಳ ಆಚರಣೆ, ನಂಬುಗೆ, ಹಸಿವು, ಬಯಕೆ, ಹಾಡು-ಪಾಡನ್ನು ಬಿಚ್ಚಿಡುತ್ತಾ ಹರಿಯುತ್ತದೆ. ಈ ಸಮುದಾಯಗಳ ಅವಿಭಾಜ್ಯ ಅಂಗಗಳಾದ ಅರೆ, ತಮಟೆಯಂತಹ ವಾದ್ಯಗಳು ಈ ಅಸ್ಪಶ್ಯ ಜಗತ್ತನ್ನು ನಾದ ಜಗತ್ತನ್ನಾಗಿ ಮಾಡಿವೆ. ಜಗತ್ತಿಗೆ ಅಕ್ಷರವೆಂಬ ಮತ್ತೊಂದು ಪ್ರಜ್ಞೆ ತಾಕಿಕೊಂಡಾಗ ಉಂಟಾಗುವ ಸಂಬಂಧ ಹಾಗೂ ಸಂಘರ್ಷ ಈ ನಾಟಕದ ಜೀವಾಳವಾಗಿದೆ ಎಂದು ಮಾಹಿತಿ ನೀಡಿದರು.
ನಾಟಕ ರಚನೆ ಮತ್ತು ನಿರ್ದೇಶನವನ್ನು ಲಕ್ಷ್ಮಣ.ಕೆ.ಪಿ, ಸಹ ನಿರ್ದೇಶನವನ್ನು ಸ್ಕಂದಘಾಟಿ, ಶ್ರೀಹರ್ಷ.ಬಿ.ಎನ್., ಪಾತ್ರಧಾರಿಗಳು ಮತ್ತು ಸಂಗೀತಗಾರರಾಗಿ ಬಿಂದು ರಕ್ಷಿದಿ, ರಮಿಕಾ ಚೈತ್ರ, ಸಂತೋಷ ದಿಂಡಗೂರು, ನರಸಿಂಹರಾಜು.ಬಿ.ಕೆ., ಭರತ್ ಡಿಂಗ್ರಿ ಹಾಗೂ ವಿನ್ಯಾಸ ಮತ್ತು ತಾಂತ್ರಿಕ ತಂಡದ ಪ್ರೊಡಕ್ಷನ್ ಮ್ಯಾನೇಜರ್ ಪೂರ್ವಿ ಕಲ್ಯಾಣಿ, ಬೆಳಕಿನ ವಿನ್ಯಾಸ ಮಂಜು ನಾರಾಯಣ್, ವಸ್ತ್ರ ವಿನ್ಯಾಸ ಹೆಚ್.ಕೆ. ಶ್ವೇತಾ ರಾಣಿ ಅವರು ನಾಟಕದಲ್ಲಿ ವಿಶೇಷ ಶ್ರಮ ವಹಿಸಿದ್ದಾರೆ.