ದಾವಣಗೆರೆ, ಮಾ.14- ಚಿಗಟೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ಹೊರಗುತ್ತಿಗೆ ದಿನಗೂಲಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸು ವಂತೆ ಒತ್ತಾಯಿಸಿ ಮಂಗಳವಾರ ಆಸ್ಪತ್ರೆ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿದರು.
ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿ ರುವ ಹೊರಗುತ್ತಿಗೆ ದಿನಗೂಲಿ ನೌಕರರನ್ನು ನೇರ ಪಾವತಿದಾರರಾಗಿ ಮಾಡಬೇಕು ಹಾಗೂ ಖಾಯಂಗೊಳಿಸಬೇಕು. ಕೋವಿಡ್ -19 ವೇಳೆ ಕಾರ್ಯ ನಿರ್ವಹಿಸಿದ ನೌಕರರಿಗೆ ರಿಸ್ಕ್ ಅಲೋಯನ್ಸ್ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಧರಣಿ ನಡೆಸಲಾಗುತ್ತಿದೆ.
ಕೋವಿಡ್ ವೇಳೆ ಸರ್ಕಾರದ ಸೂಚನೆಯಂತೆ ಮನೆಗೆ ತೆರಳದೆ ಹಿಂದುಳಿದ ವರ್ಗಗಳ ಹಾಸ್ಟೆಲ್‌ನಿಂದ ನೀಡಿದ ಊಟ ಸೇವಿಸಿ ಕಾರ್ಯ ನಿರ್ವಹಿಸಿದ ಗುತ್ತಿಗೆ ನೌಕರರಿಗೆ, ಖಾಯಂ ನೌಕರರಂತೆ ರಿಸ್ಕ್ ಭತ್ಯೆ ಮಂಜೂರು ಮಾಡಲಾಗುವುದು ಎಂದು ಆರೋಗ್ಯ ಸಚಿವರು ನೀಡಿದ ಭರವಸೆ ಈಡೇರಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಕೂಡಲೇ ನೀಡಿದ ಭರವಸೆಯಂತೆ ರಿಸ್ಕ್ ಅಲೋಯನ್ಸ್ ಮಂಜೂರು ಮಾಡಬೇಕು ಹಾಗೂ ಏಜೆನ್ಸಿ ಬದಲು ನೇರ ಪಾವತಿಗೆ ಒಳಪಡಿಸಬೇಕು.
ಅನೇಕ ವರ್ಷ ಗಳಿಂದ ಕೆಲಸ ಮಾಡಿದ ನೌಕರರನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಲಾಯಿತು.
ಡಾ.ಬಿ.ಆರ್ ಅಂಬೇಡ್ಕರ್ ರಾಜ್ಯ ಸರ್ಕಾರಿ ಆಸ್ಪತ್ರೆಗಳ ಗುತ್ತಿಗೆ ನೌಕರರ ಹಾಗೂ ಇತರೆ ದಿನಗೂಲಿ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಡಿ.ಹನುಮಂತಪ್ಪ, ಕೆ.ಬಸವರಾಜ್, ಹೆಚ್.ತಿಪ್ಪೇಸ್ವಾಮಿ, ಹೆಚ್.ಕರಿಬಸಪ್ಪ, ಹೆಚ್.ಡಿ. ಸುರೇಂದ್ರ, ಹೂವಮ್ಮ, ಜಿ.ಬಸವರಾಜ್, ತರುಣಾಬಾನು, ಶಾಹಿದಾ, ವಿನೋದಾ ಬಾಯಿ, ಎಸ್. ಗುರುಮೂರ್ತಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.