ಪತ್ರಕರ್ತರಿಗೂ-ರಾಜಕಾರಣಿಗಳಿಗೂ ಅವಿನಾಭಾವ ಸಂಬಂಧ: ಬೊಮ್ಮಾಯಿ

ಬೆಂಗಳೂರು, ಮಾ. 13- ಪತ್ರಕರ್ತರಿಗೂ ರಾಜಕಾರಣಿಗಳಿಗೂ ಅವಿನಾಭಾವ ಸಂಬಂಧವಿದ್ದು, ಒಬ್ಬರನ್ನು ಬಿಟ್ಟರೆ ಮತ್ತೊಬ್ಬರಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ‌ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ  ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ಪತ್ರಕರ್ತರಿಗೆ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ರಾಜಕಾರಣಿಗಳು ಬೆಳಿಗ್ಗೆ ಎದ್ದ ತಕ್ಷಣ ಪತ್ರಿಕೆಗಳನ್ನು ನೋಡುತ್ತಾರೆ. ಪತ್ರಿಕೆಗಳು ಇಲ್ಲದಿದ್ದರೆ ಅವರು ಮಾಡಿದ ಭಾಷಣಗಳು ಜನರನ್ನು ತಲುಪುವುದಿಲ್ಲ. ಹಾಗೆಯೇ ರಾಜಕಾರಣಿಗಳಿರದೇ ಇದ್ದರೆ ಪತ್ರಿಕೆಗಳಿಗೆ ರಾಜಕೀಯ ಸುದ್ದಿಗಳೇ ಸಿಗುವುದಿಲ್ಲ ಎಂದು ಹೇಳಿದರು.

ಟೀಕೆಗಳನ್ನು ಸಹಿಸಿಕೊಳ್ಳುವ ಮನೋಭಾವ ರಾಜಕಾರಣಿಗಳಿಗೆ ಇರಬೇಕು. ಹಾಗೆಯೇ ಉತ್ತಮ ಕೆಲಸ ಮಾಡುವವರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುವ ಗುಣ ಪತ್ರಕರ್ತರಲ್ಲೂ ಇರಬೇಕು. ಆಗ ಧನಾತ್ಮಕವಾಗಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರಶ್ನೆಗಳನ್ನು ಕೇಳಿ ರಾಜಕಾರಣಿಗಳ ಬೆವರಿಳಿಸುವಂತೆ ಮಾಡಲಾಗುತ್ತಿತ್ತು. ಆದರೆ ಇಂದಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ 120ಕ್ಕೂ ಹೆಚ್ಚು ಪತ್ರಕರ್ತರನ್ನು ಸನ್ಮಾನಿಸಿ ನಿಜಕ್ಕೂ ಬೆವರಿಳಿಯಿತು ಎಂದು ಬೊಮ್ಮಾಯಿ ಚಟಾಕಿ ಹಾರಿಸಿದರು.

ಅನೇಕ ವರ್ಷಗಳ ಕಾಲ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅತ್ಯಂತ ಹಿರಿಯ ಪತ್ರಕರ್ತರೂ ಸೇರಿದಂತೆ ಇತ್ತೀಚೆಗೆ ಕ್ಷೇತ್ರಕ್ಕೆ ಬಂದು ಸಾಧನೆಗೈದ ಕಿರಿಯ ಪತ್ರಕರ್ತರಿಗೂ ಇಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಎಲ್ಲರಿಗೂ ಅಭಿನಂದನೆ ಎಂದರು.

ವಿಜಯವಾಣಿ ಸಂಪಾದಕ ವಿಜಯ ಸಂಕೇಶ್ವರ ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದರು.

ಕಂದಾಯ ಸಚಿವ ಆರ್.ಅಶೋಕ್, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಪಬ್ಲಿಕ್ ಟಿವಿ ರಂಗನಾಥ್‌ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!