ಹಾವೇರಿ, ಮಾ. 10 – ರೈತನೋರ್ವ ಪುರಸಭೆ ಅಧಿಕಾರಿಗೆ ತನ್ನ ಎತ್ತನ್ನೇ ಲಂಚವಾಗಿ ನೀಡಲು ಬಂದ ಘಟನೆ ಸವಣೂರಿನಲ್ಲಿ ನಡೆದಿದೆ.
ರೈತ ಯಲ್ಲಪ್ಪ ರಾಣೋಜಿ ಅವರ ಮನೆ ಖಾತೆ ಬದಲಿಸಬೇಕಿತ್ತು. ಇದಕ್ಕಾಗಿ ಹಿಂದೊಬ್ಬ ಅಧಿಕಾರಿಗೆ ಹಣ ಕೊಟ್ಟಿದ್ದರು. ಆ ಅಧಿಕಾರಿ ವರ್ಗಾವಣೆಯಾಗಿ, ಇನ್ನೋರ್ವ ಅಧಿಕಾರಿ ಬಂದಿದ್ದರು. ಅಧಿಕಾರಿ ಮತ್ತೆ ಹಣ ಕೊಡುವಂತೆ ಕೇಳಿದ್ದರು.
ಈ ಹಿನ್ನೆಲೆಯಲ್ಲಿ ಎತ್ತು ಹಾಗೂ ಬಾರಕೋಲು ಸಮೇತ ಪುರಸಭೆಗೆ ಬಂದ ಯಲ್ಲಪ್ಪ, ದುಡ್ಡು ಕೊಡುವ ತನಕ ಎತ್ತನ್ನು ನೀವೇ ಇಟ್ಟುಕೊಳ್ಳಿ ಎಂದು ಪುರಸಭೆ ಸಿಬ್ಬಂದಿಗೆ ತಿಳಿಸಿದರು.
ಈ ಬೆಳವಣಿಗೆಯಿಂದ ಪುರಸಭೆ ಸಿಬ್ಬಂದಿ ಅವಾಕ್ಕಾದರು. ಸ್ವಲ್ಪ ಕಾಲ ಗೊಂದಲದ ವಾತಾವರಣ ಉಂಟಾಗಿತ್ತು.
ಈ ಬಗ್ಗೆ ಮಾತನಾಡಿರುವ ಯಲ್ಲಪ್ಪ, ಎರಡು ವರ್ಷಗಳಿಂದ ಖಾತೆಗಾಗಿ ಅಲೆದಾಡಿದ್ದೆ. ಆದರೂ ಖಾತೆ ಮಾಡಿಕೊಟ್ಟಿರಲಿಲ್ಲ. ಖಾತೆ ಬದಲಾವಣೆಗೆ 25 ಸಾವಿರ ರೂ. ಲಂಚ ಕೇಳಿದ್ದರು. ಅದರ ಬದಲು ಎತ್ತನ್ನೇ ತಂದಿದ್ದೇನೆ ಎಂದು ಹೇಳಿದರು.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಘಟನೆಗೆ ಕಾರಣವಾದ ಅಧಿಕಾರಿಯ ಕುರಿತು ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗಳಿಗೆ ಕಳಿಸಲಾಗುವುದು ಎಂದರು.