ದಾವಣಗೆರೆ, ಮಾ. 7 – ವಾಹನ ಖರೀದಿ ಮಾಡಿದ ಗ್ರಾಹಕನಿಗೆ ಪರಿಹಾರ ಮೊತ್ತ ರೂ.13,75,880ಗಳನ್ನು 30 ದಿನದೊಳಗೆ ಪಾವತಿಸುವಂತೆ ಶ್ರೀರಾಮ ಫೈನಾನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ಹೊರಡಿಸಿದೆ.
ದಾವಣಗೆರೆ ನಿವಾಸಿ ಅಹಮದ್ ರಾಜಾಖಾನ ಅವರು ದಿ.19.12.2019 ರಂದು ದಾವಣಗೆರೆ ಶ್ರೀರಾಮ ಫೈನಾನ್ಸ್ ಶಾಖೆ ನಡೆಸಿದ ಸಾರ್ವಜನಿಕ ಹರಾಜಿನಲ್ಲಿ ರೂ.ಎಂಟು ಲಕ್ಷಕ್ಕೆ ವಾಹನ ಖರೀದಿಸಿದ್ದರು. ಫೈನಾನ್ಸ್ ಶಾಖೆಯವರು ವಾಹನವನ್ನು ಖರೀದಿದಾರರ ಹೆಸರಿಗೆ ವರ್ಗಾವಣೆ ಮಾಡಲು ಫಾರ್ಮ ನಂ.29 ಮತದ್ತು 30ಕ್ಕೆ ಸಹಿ ಮಾಡಿದ್ದರು. ನಂತರ ವಾಹನವನ್ನು ತಮ್ಮ ಹೆಸರಿಗೆ ಮಾಡಿಕೊಡಲು ದಾವಣಗೆರೆ ಆರ್.ಟಿ.ಒಗೆ ಮನವಿ ಸಲ್ಲಿಸಿದ್ದರು.
ವಾಹನದ ಮೇಲೆ ಈಗಾಗಲೇ ಒಂದು ಕ್ರಿಮಿನಲ್ ಪ್ರಕರಣದಲ್ಲಿ ಜಪ್ತಾಗಿ ನ್ಯಾಯಾಲಯದಿಂದ ತಾತ್ಕಾಲಿಕ ಸುಪರ್ದಿಗಾಗಿ ವಾಹನ ನೋಂದಾಯಿತ ಮಾಲೀಕರಿಗೆ ಕೊಡಮಾಡಲಾಗಿದೆ. ಹಾಗಾಗಿ ಸಾರ್ವಜನಿಕ ಹರಾಜಿನಲ್ಲಿ ಖರೀದಿಸಿದ ಖರೀದಿದಾರರಿಗೆ ವಾಹನ ವರ್ಗಾವಣೆ ಸಾಧ್ಯವಿಲ್ಲ ಎಂದು ಆರ್.ಟಿ.ಒ. ಅಧಿಕಾರಿಗಳು ತಿಳಿಸಿದ್ದರಿಂದ ಅಹಮದ್ ರಾಜಾಖಾನ ಅವರು ಶ್ರೀರಾಮ ಪೈನಾನ್ಸ್ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು.ಗೀತಾ ನೇತೃತ್ವದ ತಂಡ ವಾಹನ ಖರೀದಿಸಿದ ಮೊತ್ತ ರೂ.ಎಂಟು ಲಕ್ಷ, ಭದ್ರತಾ ಠೇವಣಿ ಮೊತ್ತ ರೂ.18,880/-, ವಾಹನ ಸತತ ಮೂರು ವರ್ಷ ಕಾರ್ಯನಿರ್ವಹಸದೇ ನಿಂತಿದ್ದಕ್ಕೆ ಆರ್ಥಿಕ ನಷ್ಟ ರೂ. ಐದು ಲಕ್ಷ, ಪ್ರಕರಣದ ವೆಚ್ಚ ರೂ.10 ಸಾವಿರ ಸೇರಿ ರೂ.13,75,880ಗಳನ್ನು ಆದೇಶವಾದ 30 ದಿನದೊಳಗಾಗಿ ಗ್ರಾಹಕನಿಗೆ ಪಾವತಿಸಲು ಶ್ರೀರಾಮ ಪೈನಾನ್ಸ್ ಕಂಪನಿಗೆ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.